ನಾಳೆ  ಕೆಪಿಎಲ್  ಫೈನಲ್ -ಬಳ್ಳಾರಿ  ಟಸ್ಕರ್ಸ್  ಎದುರಾಳಿ ಹುಬ್ಬಳ್ಳಿ  ಟೈಗರ್ಸ್

ನಾಳೆ  ಕೆಪಿಎಲ್  ಫೈನಲ್ -ಬಳ್ಳಾರಿ  ಟಸ್ಕರ್ಸ್  ಎದುರಾಳಿ ಹುಬ್ಬಳ್ಳಿ  ಟೈಗರ್ಸ್

 

ಪ್ರಗತಿವಾಹಿನಿ ಸುದ್ದಿ, ಮೈಸೂರು- 
ಬೆಳಗಾವಿ  ಪ್ಯಾಂಥರ್ಸ್  ತಂಡವನ್ನು  26  ರನ್ ಗಳ  ಅಂತರದಲ್ಲಿ  ಮಣಿಸಿದ  ಹುಬ್ಬಳ್ಳಿ  ಟೈಗರ್ಸ್ ತಂಡ  8ನೇ  ಆವೃತ್ತಿಯ  ಕರ್ನಾಟಕ  ಪ್ರೀಮಿಯರ್  ಲೀಗ್ ನ  ಫೈನಲ್  ತಲುಪಿದೆ.

ಫೈನಲ್  ಪಂದ್ಯದಲ್ಲಿ  ಟೈಗರ್ಸ್  ಈಗಾಗಲೇ  ಪ್ರಶಸ್ತಿ  ಸುತ್ತು  ತಲುಪಿರುವ  ಬಳ್ಳಾರಿ  ಟಸ್ಕರ್ಸ್ ವಿರುದ್ಧ  ಚಾಂಪಿಯನ್  ಪಟ್ಟಕ್ಕಾಗಿ  ಸೆಣಸಲಿದೆ.
155 ರನ್  ಗಳ ಸುಲಭ  ಗುರಿ  ಬೆಂಬತ್ತುವಲ್ಲಿ  ವಿಫಲವಾದ  ಬೆಳಗಾವಿ  ಪ್ಯಾಂಥರ್ಸ್  ಕೇವಲ 19.4 ಓವರ್ ಗಳಲ್ಲಿ   128 ರನ್ ಗೆ  ಸರ್ವ  ಪತನ  ಕಂಡು  ಫೈನಲ್  ತಲುಪುವಲ್ಲಿ  ವಿಫಲವಾಯಿತು.
ಶ್ರೇಯಸ್  ಗೋಪಾಲ್  (17ಕ್ಕೆ 2)  ಒಂದೇ  ಓವರ್ ನಲ್ಲಿ  ಎರಡು  ವಿಕೆಟ್  ಅಮೂಲ್ಯ  ವಿಕೆಟ್ ಕಬಳಿಸುವ  ಮೂಲಕ  ಟೈಗರ್ಸ್ ಗೆ  ಜಯದ  ಹಾದಿಯನ್ನು  ಸುಗಮಗೊಳಿಸಿದರು.  ಅಭಿನವ್ ಮನೋಹರ್ (38)  ಹೊರತುಪಡಿಸಿದರೆ  ಪ್ಯಾಂಥರ್ಸ್  ಪಡೆಯ  ಇತರ  ದಾಂಡಿಗರು  ರನ್  ಗಳಿಸಲು  ಪರದಾಡಿದರು.  ಅಭಿಲಾಶ್  ಶೆಟ್ಟೆ (33ಕ್ಕೆ 3), ಆದಿತ್ಯ  ಸೋಮಣ್ಣ  (21ಕ್ಕೆ 2)  ಹಾಗೂ ಪ್ರವೀಣ್  ದುಬೆ (31ಕ್ಕೆ 2)  ಟೈಗರ್ಸ್ ಜಯದಲ್ಲಿ  ಪ್ರಮುಖ  ಪಾತ್ರವಹಿಸಿದರು.

 ಟೈಗರ್ಸ್ 154ಕ್ಕೆ ಆಲೌಟ್

ಇಲ್ಲಿನ  ಶ್ರೀಕಂಠದತ್ತ  ನರಸಿಂಹರಾಜ  ಒಡೆಯರ್  ಕ್ರೀಡಾಂಗಣದಲ್ಲಿ  ನಡೆಯುತ್ತಿರುವ  ಕರ್ನಾಟಕ ಪ್ರೀಮಿಯರ್  ಲೀಗ್  ಎರಡನೇ  ಕ್ವಾಲಿಫಯರ್  ಪಂದ್ಯದಲ್ಲಿ  ಹುಬ್ಬಳ್ಳಿ  ಟೈಗರ್ಸ್  ತಂಡ ಎದುರಾಳಿ  ಬೆಳಗಾವಿ  ಪ್ಯಾಂಥರ್ಸ್ ಗೆ  ಸಾಧಾರಣ  ಮೊತ್ತದ  ಸವಾಲನ್ನು  ನೀಡಿತು.  20 ಓವರ್ ಗಳಲ್ಲಿ  ವಿನಯ್ ಕುಮಾರ್  ಪಡೆ 154 ರನ್ ಗಳಿಸಿ  ಸರ್ವಪತನ ಕಂಡಿತು.
ಕೊನೆಯ  ಓವರ್ ನಲ್ಲಿ  ಸಾಮಾನ್ಯ  ಬೌಂಡರಿ  ಹಾಗೂ  ಸಿಕ್ಸರ್ ಗಳು  ಇದುವರೆಗೂ  ಮೂಡಿ ಬಂದಿತ್ತು.  ಆದರೆ  ಟೈಗರ್ಸ್  ನಾಲ್ವರು  ಆಟಗಾರರು  ಸತತ  ನಾಲ್ಕು  ಎಸೆತಗಳಲ್ಲಿ  ರನೌಟ್ ಗೆ ಬಲಿಯಾದದ್ದು  ರನ್ ಗಳಿಕೆಯ  ಮೇಲೆ  ಕಡಿವಾಣ  ಬಿದ್ದಂತಾಯಿತು.
ಮೊಹಮ್ಮದ್  ತಹಾ  (63), ಕೆಬಿ ಪವನ್  (31) ಹಾಗೂ  ಪವನ್  ದೇಶಪಾಂಡೆ  (29) ಅವರನ್ನು ಹೊರತುಪಡಿಸಿದರೆ  ಉಳಿದ  ಆಟಗಾರರು  ನೈಜ ಸಾಮರ್ಥ್ಯ  ತೋರುವಲ್ಲಿ  ವಿಫಲರಾದರು. ಬೆಳಗಾವಿ  ಪ್ಯಾಂಥರ್ಸ್  ಪರ  ರಿತೇಶ್ ಭಟ್ಕಳ್  (26ಕ್ಕೆ 2) ಹಾಗೂ  ಶ್ರೀಶ  ಆಚಾರ್  ( 34ಕ್ಕೆ 3) ಬೌಲಿಂಗ್ ನಲ್ಲಿ  ಮಿಂಚಿ ಟೈಗರ್ಸ್  ರನ್ ಗಳಿಕೆಗೆ  ಕಡಿವಾಣ  ಹಾಕಿದರು.
ತಹಾಗೆ  ಆರೆಂಜ್  ಕ್ಯಾಪ್
ಇದುವರೆಗೂ  ಆಡಿರುವ  ಪಂದ್ಯಗಳಲ್ಲಿ  ಅತಿ  ಹೆಚ್ಚು  ರನ್  ಗಳಿಸಿರುವ  ಮೊಹಮ್ಮದ್  ತಹಾ ಆರೆಂಜ್  ಕ್ಯಾಪ್  ಗೌರವಕ್ಕೆ  ಪಾತ್ರರಾದರು.  8 ಪಂದ್ಯಗಳಲ್ಲಿ  ಅವರು  253 ರನ್  ಗಳಿಸಿದರು.
ಟಾಸ್ ಗೆದ್ದ  ಪ್ಯಾಂಥರ್ಸ್  ಫೀಲ್ಡಿಂಗ್  ಆಯ್ದುಕೊಂಡಿತು.  ಟೈಗರ್ಸ್  ಈ ಹಿಂದಿನ  ಎರಡು ಮುಖಾಮುಖಿಯಲ್ಲಿ  ಪ್ಯಾಂಥರ್ಸ್  ವಿರುದ್ಧ  ಜಯಗಳಿಸಿ  ಮೇಲುಗೈ  ಸಾಧಿಸಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button