ಬೆಳಗಾವಿಯಲ್ಲಿ ಬೃಹತ್ ಕೈಗಾರಿಕಾ ಘಟಕ ಸ್ಥಾಪಿಸಲು ಕುಮಾರಸ್ವಾಮಿಗೆ ಅನಿಲ ಬೆನಕೆ ಮನವಿ
ಪ್ರಗತಿವಾಹಿನಿ ಸುದ್ದಿ: ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಎಚ್. ಡಿ. ಕುಮಾರಸ್ವಾಮಿ ಅವರನ್ನು ರಾಜ್ಯ ಬಿಜೆಪಿ ಉಪಾದ್ಯಕ್ಷ ಹಾಗೂ ಮಾಜಿ ಶಾಸಕ ಅನಿಲ ಬೆನಕೆ ಭೇಟಿ ನೀಡಿ ಬೆಳಗಾವಿಯಲ್ಲಿ ಬೃಹತ್ ಕೈಗಾರಿಕಾ ಘಟಕ ಸ್ಥಾಪನೆಗೆ ಮನವಿ ಸಲ್ಲಿಸಿದರು.
ಈ ಸಂದರ್ಬದಲ್ಲಿ ಸಚಿವರೊಂದಿಗೆ ಚರ್ಚಿಸಿದ ಅನಿಲ ಬೆನಕೆ, ಭಾರತದಲ್ಲಿ ಕೈಗಾರಿಕಾ ಬೆಳವಣಿಗೆಯಲ್ಲಿ ಬೆಳಗಾವಿ ಯಾವಾಗಲು ಮುಂಚೂಣಿಯಲ್ಲಿದೆ. ಅದರ ಅಂತರ್ಗತ ಸಾಮರ್ಥ್ಯದೊಂದಿಗೆ ಅದರ ಉದ್ಯಮಶೀಲ ನಾಗರಿಕರೊಂದಿಗೆ, ಬೆಳಗಾವಿಯು ಹೂಡಿಕೆಯ ಅವಕಾಶಗಳಿಗೆ ಸೂಕ್ತವಾದ ಆಯ್ಕೆಯನ್ನು ಒದಗಿಸುತ್ತದೆ. ಬೆಳಗಾವಿಯು ಹಲವಾರು ಕೈಗಾರಿಕೆಗಳನ್ನು ಹೊಂದಿದೆ ಮುಖ್ಯವಾಗಿ ಹೈಡ್ರಾಲಿಕ್ ಮತ್ತು ಫೌಂಡ್ರಿ ಕೈಗಾರಿಕೆಗಳು ಅತೀ ಹೆಚ್ಚಾಗಿವೆ, ಆಹಾರ ಧಾನ್ಯಗಳು, ಕಬ್ಬು, ಹತ್ತಿ, ತಂಬಾಕು, ಎಣ್ಣೆಬೀಜ ಮತ್ತು ಹಾಲಿನ ಉತ್ಪನ್ನಗಳ ವ್ಯಾಪಾರ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.
ಮುಖ್ಯವಾಗಿ ಬೆಲೆಬಾಳುವ ಲೋಹಗಳು, ಖನಿಜಗಳು, ಸಿಲಿಕಾನ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಆದ್ದರಿಂದ ಸಿಮೆಂಟ್, ಪಾವರಲೂಮ್ ಮುಂತಾದ ಕಾರ್ಖಾನೆಗಳಿಗೆ ಸೂಕ್ತ ಪ್ರದೇಶ. ಶೈಕ್ಷಣಿಕ ಕೇಂದ್ರ ಎಂದು ಕೀರ್ತಿ ಪಡೆದ ಬೆಳಗಾವಿ ಹೆಸರಾಂತ ವಿಶ್ವವಿದ್ಯಾಲಯಗಳು, ಇಂಜಿನಿಯರಿಂಗ ಕಾಲೇಜುಗಳು, ತಾಂತ್ರಿಕ ಸಂಸ್ಥೆಗಳು ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಹೊಂದಿರುವುದರಿಂದ ಮಾನವ ಸಂಪನ್ಮೂಲ ಸಮಸ್ಯೆ ಇಲ್ಲ ಮತ್ತು ನಗರದ ಸುತ್ತಮುತ್ತ ಸರ್ಕಾರಿ ಭೂಮಿ ಇದೆ ಇದು ರೇಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಮತ್ತು ರಾಷ್ಟ್ರೀಯ ಹೆದ್ದಾರಿಯ ಹತ್ತಿರದಲ್ಲಿರುವುದರಿಂದ ಎಲ್ಲ ರೀತಿಯ ಅಗತ್ಯ ಪೂರೈಕೆ ಸಾಧ್ಯ. ಮುಖ್ಯವಾಗಿ ಬೆಳಗಾವಿ ಯುವ ಪ್ರತಿಭೆಗಳಿಗೆ ಉದ್ಯೋಗ ಅವಕಾಶ ಸಿಗಲಿದೆ, ಆದ್ದರಿಂದ ತಾವು ಬೆಳಗಾವಿಯಲ್ಲಿ ಬೃಹತ (ಭಾರೀ) ಕೈಗಾರಿಕಾ ಘಟಕ ಸ್ಥಾಪನೆಗೆ ಒತ್ತು ನೀಡಿ ಬೆಳಗಾವಿಗೆ ಆಗಮಿಸಿ ಸ್ಥಳ ಪರಿಶೀಲನೆ ಮಾಡಿ ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ