ಕುಡಚಿ, ರಾಯಬಾಗ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಟವೆಲ್: ಅಳಗವಾಡಿಯಲ್ಲಿ ಮನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ಕೈ ವಶ ಮಾಡಿಕೊಂಡಿರುವ ಲೋಕೋಪಯೋಗಿ ಸಚಿವರೂ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸತೀಶ್ ಜಾರಕಿಹೊಳಿ ಇದೀಗ ರಾಯಬಾಗ ಮತ್ತು ಕುಡಚಿ ಕ್ಷೇತ್ರದ ಮೇಲೆ ಕಣ್ಣು ಹಾಕಿದ್ದಾರೆ.
ರಾಯಬಾಗ ಮತ್ತು ಕುಡಚಿ ಎರಡೂ ಕ್ಷೇತ್ರಗಳು ಬರುವ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಯಾಗಲಿವೆ. ಹಾಗಾಗಿ ನಾವು ಅಲ್ಲಿ ಟವೆಲ್ ಹಾಕುತ್ತೇವೆ. ಎರಡೂ ಕ್ಷೇತ್ರದ ಮಧ್ಯ ಇರುವ ಅಳಗವಾಡಿಯಲ್ಲಿ ಮನೆ ಮಾಡಿದ್ದೇನೆ ಎಂದು ಸತೀಶ್ ಜಾರಕಿಹೊಳಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಯಬಾಗ ಹಾಗೂ ಕುಡುಚಿ ಮುಂದಿನ ಸಲದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರವಾಗುತ್ತದೆ. ಅಲ್ಲಿ ನಮಗೆ ಅವಕಾಶ ಸಿಕ್ಕರೆ ಟಾವೆಲ್ ಹಾಕುತ್ತೇವೆ. ಉತ್ತಮ ಕಾರ್ಯಕರ್ತ ಇದ್ದರೆ ಅವರಿಗೆ ಅವಕಾಶ ಕೊಡಲಾಗುವುದು. ಈಗಾಗಲೇ ಅಳಗವಾಡಿಯಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದೇವೆ. ರಾಯಬಾಗಕ್ಕೂ ಹಾಗೂ ಕುಡುಚಿ ಮತಕ್ಷೇತ್ರಕ್ಕೂ ಸಮೀಪವಾಗುತ್ತದೆ ಎಂದರು.
ಮಹೇಂದ್ರ ತಮ್ಮಣ್ಣವರ ನಮ್ಮ ಜೊತೆಗೆ ಇರಬೇಕೆಂದೇನೂ ಇಲ್ಲ. ಅವರು ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ತಪ್ಪು ಮಾಡಿದ್ದರು. ಅದನ್ನು ಹೇಳಿದ್ದೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಕುರಿತು ಹೈಕಮಾಂಡ್ ಚರ್ಚೆ ಮಾಡಬೇಕು. ಅಧ್ಯಕ್ಷರಾಗಲು ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ ಅಂತಿಮವಾಗಿ ಪಕ್ಷ ನಿರ್ಧಾರ ಮಾಡಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಚುನಾವಣೆ ದೂರ ಇದೆ. ಪಕ್ಷ ಸಂಘಟನೆ ಮಾಡುವವರನ್ನು ಹೈಕಮಾಂಡ್ ತೀರ್ಮಾನ ಮಾಡಬೇಕು. ನಾವು ಮನವಿ ಕೊಟ್ಟಿಲ್ಲ. ದೆಹಲಿಗೆ ಹೋದಾಗ ಬೇರೆ ಬೇರೆ ಇಲಾಖೆಯ ಕೇಂದ್ರ ಸಚಿವರನ್ನು ಭೇಟಿಯಾಗಿ ಬಂದಿದ್ದೇವೆ. ಎಐಸಿಸಿ ಅಧ್ಯಕ್ಷರನ್ನು ಭೇಟಿಯಾದಾಗ ರಾಜಕೀಯ ಮಾತನಾಡುವುದು ಸಹಜ, ಎಲ್ಲರೂ ಮಾಡಿಯೇ ಮಾಡುತ್ತಾರೆ ಎಂದರು.
ಹೆಚ್ಚುವರಿ ಡಿಸಿಎಂ ಮಾಡುವ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು. ಪ್ರತಿ ದಿನ ಡಿಸಿಎಂ, ಅಧ್ಯಕ್ಷರ ಬದಲಾವಣೆ ಕೂಗಿನಿಂದ ವಿಪಕ್ಷಗಳಿಗೆ ಅದು ಆಹಾರವಾಗಿದೆ ಎಂದರು.
ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ನಿಗಮ ಮಂಡಳಿ ಹೆಚ್ಚು ಸ್ಥಾನ ಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.
ಶಾಸಕ ಆಸೀಫ್ ಸೇಠ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ, ಬೆಳಗಾವಿ ಗ್ಯಾರಂಟಿ ಯೋಜನೆ ಅಧ್ಯಕ್ಷರೂ ಆಗಿರುವ ವಿನಯ ನಾವಲಗಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ