Kannada NewsKarnataka NewsNationalPolitics

*ವೇದಾಂತದ ಪ್ರಖರ ವಾಗ್ಮಿ ಬಸವರಾಜ ಯಡ್ರಾವಿ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ : ಕಳೆದ ಸುಮಾರು 5 ದಶಕಗಳಿಗೂ ಹೆಚ್ಚು ಕಾಲ ವಿಶೇಷವಾಗಿ ಶ್ರೀನಿಜಗುಣ ಶಿವಯೋಗಿಗಳ ಎಲ್ಲ ಕೃತಿಗಳನ್ನಾಧರಿಸಿ  ಶಾಸ್ತ್ರ  ಚಿಂತನೆಯ ವೇದಾಂತದ ಪ್ರಖರ ವಾಗ್ಮಿಗಳಾಗಿದ್ದ ಬಸವರಾಜ ಯಲ್ಲಪ್ಪ ಯಡ್ರಾವಿ (82) ಶುಕ್ರವಾರ ನಗರದ ಶಿವಗಿರಿಯ ಅವರ ನಿವಾಸದಲ್ಲಿ ನಿಧನರಾದರು.

ಹುಬ್ಬಳ್ಳಿಯ ಶ್ರೀಸಿದ್ಧಾರೂಢಮಠ, ದೇವರಹುಬ್ಬಳ್ಳಿಯ ಸಿದ್ಧಾಶ್ರಮ ಹಾಗೂ ನಾಡಿನ ವಿವಿಧೆಡೆ ಶ್ರೀಸಿದ್ಧಾರೂಢ ಪರಂಪರೆಯ ವಿವಿಧ ಮಠಗಳಲ್ಲಿ ನಿರಂತರವಾಗಿ ವೇದಾಂತ ಚಿಂತನೆಗೆ ತಮ್ಮನ್ನೇ ತಾವು ಸಮರ್ಪಿಸಿಕೊಂಡು ಶ್ರೀನಿಜಗುಣ ಶಿವಯೋಗಿಗಳ ಮೇರು ಕೃತಿ ‘ಪರಮಾನುಭವಬೋಧೆ’ಯನ್ನು ಕೇಂದ್ರೀಕರಿಸಿ ಮೋಕ್ಷ ಮಾರ್ಗದ ವಿಸ್ತೃತ ಆಶಯಗಳನ್ನು ಹಂಚಿಕೊಂಡಿದ್ದರು.

ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದವರಾಗಿದ್ದ ಬಿ.ವೈ. ಯಡ್ರಾವಿ ಅವರು ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀಶಾಂತೇಶ್ವರ ಪ್ರೌಢ ಶಾಲೆಯಲ್ಲಿ ಆಂಗ್ಲಭಾಷಾ ಅಧ್ಯಾಪಕರಾಗಿ ಉತ್ಕೃಷ್ಟ ಸೇವೆಸಲ್ಲಿಸಿ ನಿವೃತ್ತಿ ಹೊಂದಿದ್ದರು. ಇಬ್ಬರು ಪುತ್ರರು, ಸೊಸೆ, ಮೊಮ್ಮಕ್ಕಳು ಸೇರಿ ಬಂಧುಗಳನ್ನು ಹಾಗೂ ಸಿದ್ಧಾರೂಢಮಠಗಳ ಅಪಾರ ಭಕ್ತ ಸಂಕುಲವನ್ನು ಅಗಲಿದ್ದಾರೆ.

ಸಂತಾಪ 

ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ದೇವರಹುಬ್ಬಳ್ಳಿ ಶ್ರೀಸಿದ್ಧಾಶ್ರಮದ ಸಿದ್ಧಶಿವಯೋಗಿ ಸ್ವಾಮೀಜಿ ತಮ್ಮ ಸಂತಾಪ ವ್ಯಕ್ತಪಡಿಸಿ, ಯಾವುದೇ ಫಲಾಪೇಕ್ಷೆ, ಸನ್ಮಾನ, ಪತ್ರಿಕಾ ಪ್ರಚಾರಗಳನ್ನು ಬಯಸದೇ ಕೇವಲ ಆಧ್ಯಾತ್ಮದ ಔನ್ನತ್ಯದ ಚಿಂತನೆಯನ್ನು ಜನಮನಕ್ಕೆ ಮುಟ್ಟಿಸಬೇಕೆಂಬ ಹದುಳ ಹಂಬಲವನ್ನು ಬಸವರಾಜ ಯಡ್ರಾವಿ ಹೊಂದಿದ್ದರು ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button