Kannada NewsKarnataka News

ಮಹಿಳೆಯ ಹೊಟ್ಟೆಯಲ್ಲಿತ್ತು 4 ಕಿಲೋ ತೂಕದ ಗಡ್ಡೆ 

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸುಮಾರು ೧೦ ವರ್ಷಗಳಿಂದ ಗರ್ಭಾಶಯದಲ್ಲಿ ಉಂಟಾದ ಗಂಟಿನಿಂದ ನರಳುತ್ತಿದ್ದ ರೋಗಿಗೆ ಯಳ್ಳೂರ ರಸ್ತೆಯಲ್ಲಿನ ಕೆ.ಎಲ್.ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಗಂಟಿನಿಂದ ಮುಕ್ತಿ ನೀಡಲಾಯಿತು. ೪೧ ವಯಸ್ಸಿನ ವಿವಾಹಿತ ಮಹಿಳೆಯು ಶಹಾಪುರ, ಬೆಳಗಾವಿಯ ನಿವಾಸಿಯಾಗಿದ್ದಾರೆ. ರೋಗಿಯು ಮಧುಮೇಹ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದಳು . ರಾಜ್ಯದ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಹೊಂದಿದ್ದರೂ ಗುಣಮುಖರಾಗದೇ ದಿನದಿಂದ ದಿನಕ್ಕೆ ಕ್ಷೀಣರಾಗುತ್ತಿದ್ದರು. ಅದರಂತೆ ಆ ಮಹಿಳೆಯು ತಮ್ಮ ಸಂಬಂಧಿಕರ ಸಲಹೆಯಂತೆ  ಕೆ ಎಲ್ ಇ ಆಸ್ಪತ್ರೆಗೆ ಬಂದು ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ಪ್ರಸಿದ್ದ ವೈದ್ಯರಾದ ಡಾ. ರವೀಂದ್ರ ನರಸಾಪುರ ಇವರಿಗೆ ತೋರಿಸಿದಾಗ ಆ ಮಹಿಳೆಗೆ ಗರ್ಭಾಶಯದಲ್ಲಿ ಸುಮಾರು ೪ ಕಿಲೋಗ್ರಾಮ್ ನಷ್ಟು ತೂಕದ ದೊಡ್ಡದಾದ ಬೇಡವಾದ ಗಂಟೊಂದು ಬೆಳೆದಿರುವುದು ಕಂಡು ಬಂದಿತು. ಇದನ್ನು ಸೋನೊಗ್ರಫಿಯ ಮೂಲಕ ಕಂಡುಕೊಂಡ ವೈದ್ಯರು ಡಾ. ಕೆ. ಎನ್. ಹೂಳಿಕಟ್ಟಿ, ಡಾ. ದರ್ಷಿತ ಶಟ್ಟಿ, ಪ್ರಸಿದ್ದ ಮೂತ್ರಶಾಸ್ತ್ರಜ್ಞ ಡಾ. ಅಮಿತ ಮುಂಗರವಾಡಿ ಮತ್ತು ಅರವಳಿಕೆ ತಜ್ಷರಾದ ಡಾ. ಅರುಣ ಮಳಗೆರ ಶಸ್ತ್ರ ಚಿಕಿತ್ಸೆಗೆ ಮುಂದಾದರು. ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ತರಾದ ಡಾ. ರಾಜಶ್ರೀ ಕಡಕೋಳ ಅವರ ಮಾರ್ಗದರ್ಶನದಲ್ಲಿ ಈ ತಂಡವು ಸುಮಾರು ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿತು.
ನನ್ನ ಹೊಟ್ಟೆಯಲ್ಲಿ ಬೆಳೆದಿರುವ ಗಂಟಿನ ಬಗ್ಗೆ ತಿಳಿದಿರಲಿಲ್ಲ. ಆದರೆ ನಾನು ಇಲ್ಲಿ  ಭೇಟಿ ನೀಡಿದಾಗ ವೈದ್ಯರು ನನ್ನನ್ನು ಕೂಲಂಕಷವಾಗಿ ಪರೀಕ್ಷಿಸಿದರು. ನಂತರ ಶಸ್ತ್ರಚಿಕಿತ್ಸೆಯ ಬಗ್ಗೆ ಹೇಳಿದಾಗ ನನಗೆ ಹೆದರಿಕೆಯಾಯಿತು. ನಂತರ ವೈದ್ಯರು ನನಲ್ಲಿ ಧೈರ್ಯ ತುಂಬಿದರು. ಶಸ್ತ್ರಚಿಕಿತ್ಸೆಯ ನಂತರ ನಾನೀಗ ಚೇತರಿಸಿಕೊಂಡಿದ್ದೇನೆ ಎಂದು ರೋಗಿಯು ತಿಳಿಸಿದ್ದಾರೆ.
ಆಸ್ಪತ್ರೆಯ ನಿರ್ದೇಶಕ ಡಾ. ಎಸ್ ಸಿ ಧಾರವಾಡ, ಇಂತಹ ಪ್ರಕರಣಗಳು ಮೂರು ಸಾವಿರಕ್ಕೆ  ಒಂದು ಎನ್ನುವಂತೆ ವಿರಳ ಪ್ರಕರಣವಾಗಿರುತ್ತದೆ. ಅನುವಂಶಿಕತೆ, ಕೌಟುಂಬಿಕ ಇತಿಹಾಸ, ಅತಿಯಾದ ಕೊಬ್ಬು, ಹಾರ್ಮೋನುಗಳ ಬದಲಾವಣೆ ಹಾಗೂ  ಕೆಲವೊಂದು ಔಷಧಗಳ ಅಡ್ಡ ಪರಿಣಾಮದಿಂದ ಇಂತಹ ಗಡ್ಡೆಗಳು ಬೆಳೆಯುತ್ತವೆ. ಇಂತಹ ರೋಗಿಗಳಿಗೆ ಚಿಕಿತ್ಸೆ ನೀಡಲು ಅನುಭವ ಹಾಗೂ ತಂತ್ರಜ್ಞಾನಗಳ ಜ್ಞಾನವು ಅಗತ್ಯವಾಗಿದ್ದು, ಅತ್ಯಾಧುನಿಕ ಉಪಕರಣಗಳನ್ನು ಹೊಂದಿದ ನಮ್ಮ ಆಸ್ಪತ್ರೆಯಲ್ಲಿ ಇಂತಹ ವಿರಳ ಶಸ್ತ್ರಚಿಕಿತ್ಸೆ ನಡೆದಿರುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.
ಕೆ ಎಲ್ ಇ ಸಂಸ್ಥೆಯ ಕಾರ‍್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಯಶಸ್ವಿ ಶಸ್ತ್ರಚಿಕಿತ್ಸೆ ನೀಡಿದ ವೈದ್ಯರ ಕಾರ‍್ಯವನ್ನು ಶ್ಲಾಘಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button