Kannada NewsKarnataka News

ಸಾವಳಗಿಯ ಸಿದ್ಧ ಸಂಸ್ಥಾನಮಠದಲ್ಲಿ ದಸರಾ ಉತ್ಸವ

ಪ್ರಗತಿವಾಹಿನಿ ಸುದ್ದಿ, ಗೋಕಾಕ:  ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವ ಗೋಕಾಕ ತಾಲ್ಲೂಕಿನಸಾವಳಗಿಯ ಸಿದ್ಧ ಸಂಸ್ಥಾನಮಠದಲ್ಲಿ  ಪ್ರತಿ ವರ್ಷದಂತೆ ಈ ವರ್ಷ ಸಹ ಸೆ.29 ರಿಂದ ಅ. 8ರವರೆಗೆ  ದಸರಾ ಉತ್ಸವವು ಸಿಂಹಾಸನಾಧೀಶ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿಧಿಯಲ್ಲಿ ಸಂಭ್ರಮದಿಂದ ಜರುಗಲಿವೆ. 
ಪುರಾಣ: ಪ್ರತಿ ನಿತ್ಯ ರಾತ್ರಿ 8.30ರಿಂದ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನವನ್ನು ನಿಚ್ಚಣಕಿಯ ಪಂಚಾಕ್ಷರಿ ಸ್ವಾಮಿಗಳು ನಡೆಸಿಕೊಡುವರು. ಪಂಡಿತ ಡಾ. ಪುಟ್ಟರಾಜ ಗವಾಯಿಗಳ ಶಿಷ್ಯ ರೋಣದ ಪುಟ್ಟರಾಜ ಗವಾಯಿ, ಚಿಕ್ಕಹೆಸರೂರಿನ ವಿದ್ವಾನ್ ಶಿವಕುಮಾರ ಗವಾಯಿ, ಬೆಳಗಾವಿಯ ವಿದುಷಿ ರೋಹಿಣಿ ಕರಜಗಿಮಠ ಅವರಿಂದ ಸಂಗೀತ ಇರುವುದು.
ಸಾಹಿತ್ಯ-ಸಂಸ್ಕೃತಿ ಸೌರಭ: ಸೆ. 29ರಂದು ಸಂಜೆ 7.30ಕ್ಕೆ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿಧಿಯಲ್ಲಿ ಘಟಪ್ರಭಾದ ಹಿರಿಯ ಸರ್ಜನ್ ಡಾ. ವಿಲಾಸ ನಾಯ್ಕವಾಡಿ ಕಾರ್ಯಕ್ರಮ ಉದ್ಘಾಟಿಸುವರು.
ಸೆ. 30ರಿಂದ ಅ. 7ರ ವರೆಗೆ ಪ್ರತಿ ದಿನ ಸಂಜೆ 7.30ರಿಂದ ರಾತ್ರಿ 8.30ರ ವರೆಗೆ ವಿಶೇಷ ಉಪನ್ಯಾಸ, ಹಾಡು, ನೃತ್ಯ, ಮಿಮಿಕ್ರಿ, ಭರತ ನಾಟ್ಯ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗುವವು.
ಅ. 2ರಂದು ಸಂಜೆ 7.30ಕ್ಕೆ ಬೆಳಗಾವಿ ರಾಣಿ ಚನ್ನಮ್ಮಾ ವಿವಿ ಡೀನ್ ಡಾ. ಎಸ್.ಎಂ. ಗಂಗಾಧರಯ್ಯಾ ‘ಭಾರತೀಯ ತತ್ವಶಾಸ್ತ್ರ ಮತ್ತು ವಚನಗಳು’ ಕುರಿತು ಮಾತನಾಡುವರು.
ಅ. 3ರಂದು ಸಂಜೆ 7.30ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ  ಡಾ. ಚಂದ್ರಶೇಖರ ಕಂಬಾರ, ಬೆಂಗಳೂರಿನ ಸಾಹಿತಿ ಡಾ. ಸಿದ್ದಲಿಂಗಯ್ಯ, ಕರ್ನಾಟಕ ರಾಜ್ಯ ಸಾರ್ವಜನಿಕ ಕೇಂದ್ರ ಗ್ರಂಥಾಲಯ ನಿರ್ದೇಶಕ ಸತೀಶಕುಮಾರ ಹೊಸಮನಿ ‘ಸಾಹಿತ್ಯ, ಜನಪದ ಮತ್ತು ಪುಸ್ತಕ ಸಂಸ್ಕೃತಿ’ ಗೋಷ್ಠಿಯಲ್ಲಿ ಭಾಗವಹಿಸುವರು.
ಅ. 4ರಂದು ವೈದ್ಯರ ಗೋಷ್ಠಿಯಲ್ಲಿ ಗೋಕಾಕದ ಡಾ. ಸಚೀನ ಶಿರಗಾಂವಕರ, ಡಾ. ತೇಜಸ್ ಹೊಸಮನಿ, ಡಾ. ಮಲ್ಲಿಕಾರ್ಜುನ ಬೀರನಗಡ್ಡಿ, ಡಾ. ಸಂತೋಷ ಚಿಕ್ಕೋರ್ಡೆ, ಶೀತಲ್ ಮತ್ತಿಕೊಪ್ಪ ಭಾಗವಹಿಸುವರು.
ಅ. 5ರಂದು ಅರಭಾವಿಯ ಮಹಾಂತ ಶಿವಯೋಗಿ ಕಾಲೇಜು ಪ್ರಾಚಾರ್ಯ ಪ್ರೊ. ಸುರೇಶ ಮುದ್ದಾರ ಮತ್ತು ಕಲ್ಲೋಳಿಯ ಡಾ. ಸುರೇಶ ಹನಗಂಡಿ ‘ಹಬ್ಬಗಳ ಸಾಂಸ್ಕೃತಿಕ ಪರಂಪರೆ’, ಅ. 6ರಂದು ಹುಬ್ಬಳ್ಳಿಯ ಸಾಹಿತಿ ಡಾ. ಸಂಗಮೇಶ ಹಂಡಗಿ ‘ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಪೀಠ ಪರಂಪರೆ’ ಕುರಿತು, ನಾಗನೂರಿನ ಕೃಷಿಕ ಲಕ್ಷ್ಮಣ ಸಕ್ರೆಪ್ಪಗೋಳ ‘ಸಾವಯವ ಮತ್ತು ಸಮಗ್ರ ಕೃಷಿ’ ಕುರಿತು ಮಾತನಾಡುವರು. ವಚನಗಾರ್ತಿ ಶಿವಲೀಲಾ ಹಂಡಗಿ ಸ್ವರಚಿತ ವಚನ ಹೇಳುವರು. ಅ. 7ರಂದು ಬೆಳಗಾವಿಯ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ‘ಜನಪದದಲ್ಲಿ ಮಹಿಳಾ ಸಂಸ್ಕೃತಿ’ ಕುರಿತು ಮಾತನಾಡುವರು.
ಸೀಮೋಲ್ಲಂಘನ: ಅ.8ರಂದು ಸಂಜೆ 5ಕ್ಕೆ ಪೀಠದ ಸಂಪ್ರದಾಯದಂತೆ ಸೀಮೋಲ್ಲಂಘನ ಕಾರ್ಯಕ್ರಮ ಇರುವುದು. ಜಗದ್ಗುರುಗಳು ಹಿಂದು, ಮುಸ್ಲಿಂ ಭಾವೈಕ್ಯತೆ ಸಂಕೇತವಾಗಿ ಹಿಸಿರು ರಾಜಪೋಷಾಕಿನೊಡನೆ ಸಕಲ ರಾಜಮರ್ಯಾದೆ ಬಿರುದಾವಳಿಗಳಿಂದ ಅಶ್ವಾರೂಢರಾಗಿ ಬನ್ನಿಮಂಟಪಕ್ಕೆ ದಯಮಾಡಿಸಿ ನಂತರ ಖಾನಾಪುರ, ನಂದಗಾಂವ, ಮುತ್ನಾಳ ಗ್ರಾಮಗಳ ಮೂಲಕ ಸಾವಳಗಿಯ ಪೀಠಕ್ಕೆ ಸಂಜೆ 7.30ಕ್ಕೆ ದಯಮಾಡಿಸುವರು. ರಾತ್ರಿ 8ಕ್ಕೆ ಬೃಹತ್ ವೇದಿಕೆಯಲ್ಲಿ ಮಹಾಸಭೆ ಜರುಗುವುದು. ಕಲಾವಿದರಿಗೆ, ಸಾಧಕರಿಗೆ, ಸಾಹಿತಿಗಳಿಗೆ, ರಾಜಕೀಯ ಧುರೀಣರಿಗೆ, ಉದ್ಯಮಿಗಳಿಗೆ, ಪತ್ರಕರ್ತರಿಗೆ, ಗಣ್ಯಮಾನ್ಯರಿಗೆ ವೇದಿಕೆಯಲ್ಲಿ ಗುರುರಕ್ಷೆ ಇರುವುದು ಎಂದು ಸಂಚಾಲಕ ಬಾಲಶೇಖರ ಬಂದಿ ಪ್ರಕಟಣೆಯಲ್ಲಿ ತಿಳಿಸಿರುವರು.

ಶ್ರೀಮಠದ ಪರಂಪರೆ:   

ಸಾಮರಸ್ಯದ ಸಂಗಮ: ‘ಕಾಶಿ ಕಾಬಾ ಒಂದೇ, ಪುರಾಣ ಕುರಾನ್ ಒಂದೇ, ಈಶ್ವರ ಅಲ್ಲಾ ಒಬ್ಬನೇ’ ಎನ್ನುವ ಹಿಂದೂ ಮುಸ್ಲಿಂ ಸಾಮರಸ್ಯವನ್ನು ಸಾರುವ ಸಂದೇಶವು ಅಕ್ಷರಶ: ಗೋಕಾಕ ತಾಲ್ಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಪೀಠದಲ್ಲಿ ನಿಜವೆನಿಸುತ್ತದೆ. ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಹಾಗೂ ಕಲಬುರ್ಗಿಯ ಖಾಜಾ ಬಂದೇನವಾಜರ ಸ್ನೇಹದ ಸಂಕೇತವಾಗಿ ಜಾತ್ಯಾತಿತೆಯನ್ನು ಸಾರುವ ಧಾರ್ಮಿಕ ಸ್ಥಳವೆನಿಸಿದೆ.
ದೈವಾಂಶ ಪುರುಷರಾಗಿರುವ  ಸಾವಳಗಿಯ ಶಿವಲಿಂಗೇಶ್ವರರು ಕ್ರಿ.ಶ. 1645ರಿಂದ ಕ್ರಿ.ಶ. 1748ರ ಅವಧಿಯಲ್ಲಿ ಹಲವಾರು ಪವಾಡುಗಳ ಮೂಲಕ ಭಕ್ತರ ಹೃದಯದಲ್ಲಿ ನೆಲೆಸಿರುವರು. ಕಲಬುರ್ಗಿಯ ಹಿರೇಸಾವಳಗಿ ಬಳಿಯ ಕೊಳ್ಳೂರು ಗ್ರಾಮದಲ್ಲಿ ಜನಿಸಿ ತಮ್ಮ ದೈವತ್ವ ಸಾಕ್ಷಾತ್ಕಾರದ ಮೂಲಕ ಗೋಕಾಕ ತಾಲ್ಲೂಕಿನ ಸಾವಳಗಿಯಲ್ಲಿ ನೆಲೆಸಿದರು.
ಇವರ ತಪಸ್ಸಿನ ಪ್ರಭಾವವು ಕಲಬುರ್ಗಿಯ ಬಾದಷಹ ಸುಲ್ತಾನ್ ರೋಜ್ ಬಹದ್ದೂರನ ಗುರು ಬಂದೇನವಾಜ್‍ವಲಿಯವರ ಮೇಲೆ ವಿಷೇಶವಾಗಿ ಬೀರಿತ್ತು. ಮುಸಲ್ಮಾನ್ ಗುರು ಖಾಜಾ ಬಂದೇ ನವಾಜ್‍ರು ವೀರಶೈವ ಗುರು ಶಿವಲಿಂಗೇಶ್ವರರ ಸಖ್ಯವನ್ನು ಬೆಳೆಸಿರುವ ಪ್ರತೀಕವಾಗಿ ಸಾವಳಗಿಯ ಶ್ರೀಮಠವು ಇಂದಿಗೂ ಭಾವೈಕ್ಯತೆಯನ್ನು ಬಿಂಬಿಸುವ ಜಾಗೃತ ಸ್ಥಳವಾಗಿದೆ.
ಶಿವಲಿಂಗೇಶ್ವರರು ಲೋಕಕಲ್ಯಾಣಕ್ಕಾಗಿ ಸಂಚರಿಸುವಾಗ ಅವರು ವಾಸ್ತವ್ಯ ಮಾಡಿದ ಸ್ಥಳಗಳಲ್ಲಿ ಶಿವಲಿಂಗೇಶ್ವರರ ಗದ್ದುಗೆ, ಮಠಗಳು ಸ್ಥಾಪನೆಯಾಗಿದ್ದು, ದೇಶದಾದ್ಯಂತ 360ಕ್ಕೂ ಅಧಿಕ ಶಿವಲಿಂಗೇಶ್ವರರ ಮಠಗಳು, 1100ಕ್ಕೂ ಅಧಿಕ ಗದ್ಗುಗೆಗಳಿವೆ.  ಸದ್ಯ ಸಾವಳಗಿಯ ಮೂಲ ಪೀಠದಲ್ಲಿ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು 15ನೇ ಸನ್ನಿಧಿಯವರಾಗಿ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ.
ಪ್ರತಿ ವರ್ಷ ಜಾತ್ರೆ, ದಸರಾ ಉತ್ಸವ, ಗುರುಸ್ಮರಣೆ, ಕಾರ್ತಿಕೋತ್ಸವ, ಶಿವರಾತ್ರಿ ಮತ್ತು ಪ್ರತಿ ಅಮವಾಸ್ಯೆಗೆ ವಿಶೇಷ ಕಾರ್ಯಕ್ರಮಗಳು ಮಠದಲ್ಲಿ ಭಕ್ತಿಭಾವದಲ್ಲಿ ನಡೆದುಕೊಂಡು ಬಂದಿದ್ದು, ದೇಶದ ವಿವಿಧೆಡೆಯಿಂದ ಭಕ್ತರು ಕಾರ್ಯಕ್ರಮಗಳಿಗೆ ಆಗಮಿಸುತ್ತಿರುವುದು ಸಾವಳಗಿ ಪೀಠದ ವಿಶೇಷವಾಗಿದೆ.
ಇದನ್ನೂ ಓದಿ –

ನವರಾತ್ರಿ ಉತ್ಸವಕ್ಕೆ ಸವದತ್ತಿ ಯಲ್ಲಮ್ಮನ ಗುಡ್ಡ ಸಜ್ಜು

ಚಿಂಚಲಿಯ ಮಾಯಕ್ಕಾ ದೇವಿಯ ದೇವಸ್ಥಾನದಲ್ಲಿ ಸಂಭ್ರಮದ ನವರಾತ್ರಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button