ಪ್ರಗತಿವಾಹಿನಿ ಸುದ್ದಿ: 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯ ಅಪರಾಧಿಗಳಿಗೆ ಮರಣ ದಂಡನೆ ವಿಧಿಸಿ ಆದೇಶ ಹೊರಡಿಸಿದೆ.
ಮಧ್ಯಪ್ರದೇಶ ಮೂಲದ ಜಯಸಿಂಗ್ (21). ಮುಖೇಶ್ ಸಿಂಗ್ (20) ಹಾಗೂ ಜಾರ್ಖಂಡ್ ಮೂಲದ ಮನಿಷ್ ತಿರ್ಕಿ (33) ಮರಣ ದಂಡನೆಗೆ ಗುರಿಯಾದ ಅಪರಾಧಿಗಳು.
2021ರ ನ.21ರಂದು ಮಂಗಳೂರಿನ ಹೊರವಲಯದ ಫ್ಯಾಕ್ಟರಿಯಲ್ಲಿ 8 ವರ್ಷದ ಬಾಲಕಿ ಮೇಲೆ ಮೂವರು ಕಾಮುಕರು ಅತ್ಯಾಚಾರವೆಸಗಿ, ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಮೂವರು ಕಾರ್ಮಿಕರನ್ನು ಬಂಧಿಸಿದ್ದರು.
ಅಂದು ಫ್ಯಾಕ್ಟರಿಗೆ ರಜೆ ಇದ್ದ ಕಾರಣ ಫ್ಯಾಕ್ಟರಿಯಲ್ಲಿ ಯಾರೂ ಇರಲಿಲ್ಲ. 8 ವರ್ಷದ ಬಾಲಕಿಯನ್ನು ಹೊತ್ತುತಂದ ಕಾಮುಕರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು. ಬಾಲಕಿ ಕಿರುಚಾಡುತ್ತಿದ್ದಂತೆ ಆರೋಪಿ ಜಯಸಿಂಗ್ ಒಂದು ಕೈಯಲ್ಲಿ ಆಕೆಯ ಬಾಯಿ ಮುಚ್ಚಿ, ನ್ನೊಂದು ಕೈಯಲ್ಲಿ ಆಕೆಯ ಕತ್ತು ಹಿಸುಕಿದ್ದ. ಕಾಮುಕರ ಅಟ್ಟಹಾಸಕ್ಕೆ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಕೃತ್ಯದ ಬಳಿಕ ಬಾಲಕಿಯನ್ನು ಅಲ್ಲಿಯೇ ಇದ್ದ ಕಲ್ಲುಚಪ್ಪಡಿ ಹಾಸಿರುವ ತೋಡಿಯಲ್ಲಿ ಇಟ್ಟಿದ್ದರು.
ಮಗಳು ಕಾಣದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದರು. ಈ ವೇಳೆ ಕಲ್ಲುಚಪ್ಪಡಿಯಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿತ್ತು. ಬಾಲಕಿ ತಾಯಿ ನೀಡಿದ್ದ ದೂರಿನ ಮೇರೆಗೆ ಪೋಕ್ಸೋ ಕೇಸ್ ದಾಖಲಾಗಿತ್ತು. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಅಂತಿಮವಾಗಿ ಕೋರ್ಟ್ ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಹಾಗೂ 1,20,000 ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ