Belagavi NewsBelgaum NewsKannada NewsKarnataka NewsLatest

ನ್ಯಾಯಾಲಯದ ಆದೇಶ ಉಲ್ಲಂಘನೆ: ಹೆಸ್ಕಾಂ ಕಚೇರಿಯ ಪೀಠೋಪಕರಣ ಜಪ್ತಿ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜೆ.ಎಂ.ಎಫ್.ಸಿ ನ್ಯಾಯಾಲಯ ನೀಡಿದ ಆದೇಶ ಉಲ್ಲಂಘಿಸಿದ ಆರೋಪದಡಿ ಶುಕ್ರವಾರ ಪಟ್ಟಣದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಕಚೇರಿಯ ಕಂಪ್ಯೂಟರ್, ಪ್ರಿಂಟರ್, ಕುರ್ಚಿ, ಮೇಜು ಮತ್ತಿತರ ಪೀಠೋಪಕರಣಗಳನ್ನು ಮತ್ತು ಕಚೇರಿ ವಾಹನವನ್ನು ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿದರು.

ತಾಲ್ಲೂಕಿನ ಚಿಕ್ಕಹಟ್ಟಿಹೊಳಿ ಗ್ರಾಮದ ಈರಣ್ಣ ಸಣ್ಣಕ್ಕಿ, ಈರಪ್ಪ ದಾಸ್ತಿಕೊಪ್ಪ, ಸಿದ್ಧಯ್ಯ ಪೂಜೇರಿ ಮತ್ತು ಹಿರೇಹಟ್ಟಿಹೊಳಿಯ ಬಾಬು ಪಟಕಾಳ ಎಂಬ ರೈತರ ಕಬ್ಬು 2016ರಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ಸುಟ್ಟಿತ್ತು. ತಮಗಾದ ನಷ್ಟಕ್ಕೆ ಹೆಸ್ಕಾಂನಿಂದ ಪರಿಹಾರ ದೊರಕಿಸಿಕೊಡುವಂತೆ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ 2023ರಲ್ಲಿ ತೀರ್ಪು ಪ್ರಕಟಿಸಿ ಹೆಸ್ಕಾಂ ತಪ್ಪಿನಿಂದ ನಷ್ಟ ಅನುಭವಿಸಿದ್ದ ರೈತರಿಗೆ ಒಟ್ಟು 3.11 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು.

ನ್ಯಾಯಾಲಯದ ಆದೇಶ ಹೊರಬಿದ್ದು 1 ವರ್ಷ ಮುಗಿದರೂ ರೈತರಿಗೆ ಹೆಸ್ಕಾಂ ಪರಿಹಾರ ನೀಡದ್ದನ್ನು ಪ್ರಶ್ನಿಸಿದ್ದ ರೈತರ ಪರ ವಕೀಲರು ಹೆಸ್ಕಾಂ ಕಚೇರಿಯ ಜಪ್ತಿಗೆ ನ್ಯಾಯಾಲಯದಿಂದ ಆದೇಶ ತಂದಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಸಿಬ್ಬಂದಿ ರೈತರು ಮತ್ತು ವಕೀಲರ ಉಪಸ್ಥಿತಿಯಲ್ಲಿ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದರು. ಈ ಸಂದರ್ಭದಲ್ಲಿ ವಕೀಲರಾದ ಕೆ.ಸಿ ಕೊಡ್ಲಿ, ಎಸ್.ಎಂ ಹಳೇಮನಿ ಮತ್ತು ನ್ಯಾಯಾಲಯದ ಸಿಬ್ಬಂದಿ ಇದ್ದರು.

Home add -Advt

Related Articles

Back to top button