*ಮಕ್ಕಳದ್ದು ಸ್ವಚ್ಛ ಮನಸ್ಸು; ಎಳೆ ವಯಸ್ಸಿನಲ್ಲೇ ತಿದ್ದಿ, ತೀಡಿ ರೂಪಿಸಬೇಕು : ನಿರ್ಮಲಾ ಬಟ್ಟಲ್*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಕ್ಕಳ ಮನಸ್ಸು ಬಹಳ ಸ್ವಚ್ಛವಾಗಿರುತ್ತದೆ. ಎಳೆ ವಯಸ್ಸಿನಲ್ಲೇ ಅವರನ್ನು ತಿದ್ದಿ, ತೀಡಿದರೆ ಉತ್ತಮ ಪ್ರಜೆಗಳನ್ನಾಗಿ ಬೆಳೆಸಲು ಸಾಧ್ಯ ಎಂದು ಮಹಾಂತೇಶ ನಗರ ರಹವಾಸಿಗಳ ಸಂಘದ ಬಿಎಡ್ ಕಾಲೇಜಿನ ಪ್ರಾಚಾರ್ಯೆ, ಸಾಹಿತಿ ನಿರ್ಮಲಾ ಬಟ್ಟಲ್ ಹೇಳಿದ್ದಾರೆ.
ಬೆಳಗಾವಿಯ ಪ್ರಕೃತಿ ರೂರಲ್ ಇಂಟಿಗ್ರೇಟೆಡ್ ಡೆವಲಪ್ ಮೆಂಟ್ ಆ್ಯಂಡ್ ಎಜುಕೇಶನಲ್ ಟ್ರಸ್ಟ್ ನ ಹೆಪಿ ಅವರ್ಸ್ ನರ್ಸರಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮನೆಯಲ್ಲಿ ಒಂದು, ಎರಡು ಮಕ್ಕಳನ್ನು ಬೆಳೆಸುವುದೇ ಕಷ್ಟ. ಅಂತದ್ದರಲ್ಲಿ ಶಾಲೆಯಲ್ಲಿ ನೂರಾರು ಮಕ್ಕಳನ್ನು ಶಿಕ್ಷಕರು ಬೆಳೆಸುತ್ತಾರೆ. ಇದಕ್ಕೆ ತಾಳ್ಮೆ ಮತ್ತು ಕೌಶಲ್ಯ ಅಗತ್ಯ. ಹಾಗಾಗಿ ಶಿಕ್ಷಕರಲ್ಲಿ ವಿಶ್ವಾಸವಿಟ್ಟು, ಅವರನ್ನು ಗೌರವಿಸಬೇಕು ಎಂದು ಅವರು ವಿನಂತಿಸಿದರು.

ಹಿರಿಯ ಪತ್ರಕರ್ತ ಎಂ.ಕೆ. ಹೆಗಡೆ ಮಾತನಾಡಿ, ಮಕ್ಕಳಲ್ಲಿರುವ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸುವಲ್ಲಿ ಪಾಲಕರಷ್ಟು ಅರ್ಹತೆ ಬೇರೆ ಯಾರಿಗೂ ಇರಲು ಸಾಧ್ಯವಿಲ್ಲ. ಹಾಗಾಗಿ ಯಾರು ಏನೇ ಸಲಹೆ ನೀಡಿದರೂ, ಸಮೀಕ್ಷೆಗಳು ಏನೇ ಹೇಳಿದರೂ ಅಂತಿಮ ನಿರ್ಣಯವನ್ನು ಪಾಲಕರೇ ತೆಗೆದುಕೊಳ್ಳಬೇಕು ಎಂದರು.

ರಾಣಿ ಚನ್ನಮ್ಮ ನಗರ ಶಾಲೆಯ ಶಿಕ್ಷಕಿ ಶುಭಾ ಭಟ್, ಮುಂದಿನ ಭವಿಷ್ಯವಾಗಿರುವ ಮಕ್ಕಳನ್ನು ಸರಿಯಾದ ದಾರಿಯಲ್ಲಿ ರೂಪಿಸುವುದು ಶಿಕ್ಷಕರ ಕರ್ತವ್ಯ. ಸ್ವಂತ ಮಕ್ಕಳೆನ್ನುವ ಭಾವನೆಯಲ್ಲಿ ಶಿಕ್ಷಕರು ಪ್ರತಿ ಮಗುವನ್ನು ಬೆಳೆಸಬೇಕು ಎಂದರು.

ಶಾಲೆಯ ಮುಖ್ಯಸ್ಥೆ ಜ್ಯೋತಿ ಶೆಟ್ಟಿ, ಪದ್ಮಶ್ರೀ ಬಾಗೇವಾಡಿ, ಭರತೇಶ ಮುರಗುಂಡೆ ವೇದಿಕೆಯಲ್ಲಿದ್ದರು. ಸುಶ್ಮಿತಾ ಪೋದ್ಧಾರ ಸ್ವಾಗತಿಸಿದರು. ಗೀತಾ ತೇಲಿ ಮತ್ತು ಶ್ರೇಯಸ್ ತೇಲಿ ನಿರೂಪಿಸಿದರು. ರೇಶ್ಮಾ ದಂಡೋತಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ