Kannada NewsKarnataka NewsNationalPolitics

*ಬಸವಣ್ಣನವರ ಕಾಯಕ-ದಾಸೋಹ ಪರಿಕಲ್ಪನೆಯಲ್ಲಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ: ಸಿ.ಎಂ.ಸಿದ್ದರಾಮಯ್ಯ*  

ಪ್ರಗತಿವಾಹಿನಿ ಸುದ್ದಿ: ಇಡೀ ದೇಶ ಕಾರ್ಮಿಕರ ಶ್ರಮ, ಅವರ ದುಡಿಮೆಯನ್ನು ಅವಲಂಬಿಸಿದೆ‌. ಸಮಾಜದಲ್ಲಿ ಒಂದೇ ವರ್ಗದವರು ದುಡಿಯುತ್ತಿರಬಾರದು, ಎಲ್ಲಾ ವರ್ಗದವರೂ ದುಡಿಯಬೇಕು. ಆಗ ಮಾತ್ರ ಬುದ್ದ, ಬಸವ, ಅಂಬೇಡ್ಕರ್ ಆಶಯದ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. 

ವಿಧಾನಸೌಧದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಕೆಲಸದ ಸ್ಥಳಗಳಲ್ಲೇ ಆರೋಗ್ಯ ಸೇವೆ ಒದಗಿಸುವ 135 “ಸಂಚಾರಿ ಆರೋಗ್ಯ ಘಟಕ” ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. 

Home add -Advt

ಬಸವಣ್ಣನವರ ಕಾಯಕ-ದಾಸೋಹ ಪರಿಕಲ್ಪನೆಯಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ‌. ಸಮಾಜದಲ್ಲಿ ದುಡಿಯುವ ವರ್ಗ ಒಂದು ಕಡೆ ಇದ್ದರೆ, ದುಡಿಸಿಕೊಳ್ಳುವ ವರ್ಗ ಮತ್ತೊಂದು ಕಡೆ ಇರುತ್ತದೆ. ಯಾರು ಉತ್ಪಾದನಾ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೋ ಅವರೇ ದೇಶದ ನಿರ್ಮಾತೃಗಳು ಎಂದರು. 

ನಾಡಿನ ಹಿತದೃಷ್ಟಿಯಿಂದ ಕಾರ್ಮಿಕರು ಕೆಲಸ ಮಾಡುತ್ತಾರೆ. ಅವರು ಶ್ರದ್ಧೆಯಿಂದ ಕೆಲಸ ಮಾಡಬೇಕಾದರೆ ಆರೋಗ್ಯವಾಗಿರಬೇಕು, ಅವರು ಆರೋಗ್ಯವಾಗಿ ಇರಲು ಇಂತಹ ಸೌಲಭ್ಯಗಳು ಬೇಕು. ಇದರನ್ನು ಕಾರ್ಮಿಕ ಇಲಾಖೆ ಸಮರ್ಥವಾಗಿ ನೋಡಿಕೊಳ್ಳುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. 

ಇಡೀ ದೇಶದಲ್ಲಿ ಎಲ್ಲೂ ಕೂಡ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರಿಗೆ ಅವರ ಆರೋಗ್ಯ ಕಾಪಾಡಲು ಇಂತಹ ಯೋಜನೆಗಳಿಲ್ಲ. ಮೊದಲ ಬಾರಿಗೆ ರಾಜ್ಯದಲ್ಲಿ ವಿನೂತನ ಕಾರ್ಯಕ್ರಮ ನಾವು ಮಾಡಿದ್ದೇವೆ. ಕಾರ್ಮಿಕರು ಎಲ್ಲಿ ಕೆಲಸ ಮಾಡುತ್ತಾರೋ ಅಲ್ಲೇ ಹೋಗಿ ಉಚಿತವಾಗಿ ಆರೋಗ್ಯ ತಪಾಸಣೆ ಮಾಡುವುದು ಅದರಲ್ಲೂ ಉಚಿತವಾಗಿ ಮಾಡುವುದು ಒಳ್ಳೆಯ ಯೋಜನೆ ಎಂದರು. 

ಸಚಿವ ಸಂತೋಷ್ ಲಾಡ್ ಅವರ ಕಾಳಜಿ ಮತ್ತು ಕರ್ತವ್ಯಪ್ರಜ್ಞೆಯಿಂದಾಗಿ ಉಚಿತ ಸಂಚಾರಿ ಆಸ್ಪತ್ರೆಗಳನ್ನು ಜಾರಿಗೊಳಿಸಲಾಗಿದೆ. ಕಾರ್ಮಿಕರ ಸೆಸ್ ಹಣದಿಂದ ಕಾರ್ಮಿಕ ಕಲ್ಯಾಣ ಮಂಡಳಿ ಸುಸಜ್ಜಿತ ಸಂಚಾರಿ ಆಸ್ಪತ್ರೆಗಳನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದರು.

ಕಟ್ಟಡ ಮತ್ತು ಇತರೆ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣದಿಂದ ಸರ್ಕಾರ ಕಾರ್ಮಿಕರ ಮಕ್ಕಳಿಗಾಗಿ ಉಚಿತ ಊಟ ಮತ್ತು ವಸತಿ ಶಾಲೆಗಳನ್ನು ತೆರೆಯಲಿದೆ. ಇವೆಲ್ಲಾ ಸವಲತ್ತುಗಳನ್ನು ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಾಸಕರಾದ ರಿಜ್ವಾನ್‌ ಅರ್ಷದ್‌ ಅವರು ಮಾತನಾಡಿ, ಇದೊಂದು ಕ್ರಾಂತಿಕಾರಿ ಕಾರ್ಯಕ್ರಮ.  ಸಚಿವ ಸಂತೋಷ್‌ ಲಾಡ್‌ ಅವರ ನೇತೃತ್ವದಲ್ಲಿ ಇದು ಯಶಸ್ವಿಯಾಗಿ ನಡೆಯುತ್ತಿದೆ. ಇಲಾಖೆ ಹಾಗು ಸಚಿವರಿಗೆ ಅಭಿನಂದನೆಗಳು ಎಂದರು. 

Related Articles

Back to top button