*ಹೀಟ್ ವೇವ್ (ಶಾಖದ ಹೊಡೆತ) ದಿಂದ ಸಂರಕ್ಷಿಸಿಕೊಳ್ಳಲು ಬೆಳಗಾವಿ ಜನರಿಗೆ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಸ್ತುತ ಹಾಗೂ ಮುಂಬರುವ ಬೇಸಿಗೆ ದಿನಗಳಲ್ಲಿ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಅಧಿಕ ತಾಪಮಾನ ಹಾಗೂ ತಾಪಾಘಾತದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವದರ ಮೂಲಕ ಅಧಿಕ ತಾಪಮಾನ ಹಾಗೂ ತಾಪಾಘಾತದಿಂದ ಸಂರಕ್ಷಿಸಿಕೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಅವರು ಮನವಿ ಮಾಡಿರುತ್ತಾರೆ.
ಸಾರ್ವಜನಿಕರು ಬಿಸಿಲು ದಿನಗಳಲ್ಲಿ ಕೊಡೆ/ ಛತ್ರಿ ಬಳಸಿರಿ ಹಾಗೂ ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಉಳಿಯಲು ಪ್ರಯತ್ನಿಸಬೇಕು. ತೆಳುವಾದ ಸಡಿಲವಾದ ಹತ್ತಿಯ ಉಡುಪುಗಳನ್ನು ಧರಿಸಿ, ಆದಷ್ಟು ಬಿಳಿ ಬಣ್ಣದ ಬಟ್ಟೆಗಳ ಬಳಕೆ ಒಳ್ಳೆಯದು. ಹತ್ತಿಯ ಅಥವಾ ಟರ್ಬನ್ ಟೋಪಿ ಹಾಗೂ ಕೂಲಿಂಗ್ ಗ್ಲಾಸ್ ಧರಿಸಿರಿ. ಹಿರಿಯ ನಾಗರಿಕರಿಗೆ ಮಕ್ಕಳಿಗೆ ಹೆಚ್ಚು ನೀರು ಕುಡಿಯಲು ಕೊಡಬೇಕು. ಬೆಳಿಗ್ಗೆ 12 ರಿಂದ ಸಂಜೆ 3 ರವರೆಗೆ ಹೊರಾಂಗಣ ದೈಹಿಕ ಚಟುವಟಿಕೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಸಾಕಷ್ಟು ನೀರು ಕುಡಿಯಿರಿ. ಮಜ್ಜಿಗೆ ಮತ್ತು ಗ್ಲಕೋಸ್ / ಓಆರ್‌ಎಸ್ ಎಳೆನೀರಿನಂತಹ ದ್ರವ ಪದಾರ್ಥಗಳನ್ನು ಹೆಚ್ಚು ಉಪಯೋಗಿಸಿ. ಕೊಠಡಿಯ ತಾಪಮಾನವನ್ನು ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹೀಟ್ ಸೊಥಕ್ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಬೇಕು. ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯು ಕನಿಷ್ಟ ಬಟ್ಟೆಯನ್ನು ಹೊಂದಿರುವಂತೆ ನೋಡಿಕೊಂಡು, ವ್ಯಕ್ತಿಗೆ ತಣ್ಣೀರಿನಿಂದ ಸ್ಪಾಂಜ್ ಮಾಡಬೇಕು. ಅಥವಾ ಐಸ್ ಪ್ಯಾಕ್‌ಗಳನ್ನು ಉಪಯೋಗಿಸಬಹುದು. ಅಥವಾ ವ್ಯಕ್ತಿಯನ್ನು ಐಸ್‌ಬ್ಲಾಕ್‌ಗಳ ಮಧ್ಯ ಇಡಬಹುದು. ಹೀಟ್‌ವ್ ಸೊಥಕ್‌ಗೆ ಒಳಗಾದ ವ್ಯಕ್ತಿಗೆ ಯಾವುದೇ ಸುಧಾರಣೆ ಕಂಡು ಬರದಿದ್ದರೆ, ಅವರನ್ನು ಕೂಲಿಂಗ್ ವ್ಯವಸ್ಥೆ ಯೊಂದಿಗೆ ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಬೇಕು. ಬೇಸಿಗೆಯಲ್ಲಿ ಹೊರಗಿನಿಂದ ಬಂದ ತಕ್ಷಣ ನೀರು/ ಓಆರ್‌ಎಸ್ / ಮಜ್ಜಿಗೆಯಂತಹ ಪಾನೀಯ ಬಳಸಬಹುದು. 5 ವರ್ಷದ ಒಳಗಿನ ಮಕ್ಕಳಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಒಂದು ಚಿಟಿಕೆಯಷ್ಟು ಅಯೋಡಿಯನ್ ಉಪ್ಪು ಬೆರೆಸಿದ ನೀರನ್ನು ಕುಡಿಸುತ್ತಿರಬೇಕು. ಬೇಸಿಗೆ ದಿನಗಳಲ್ಲಿ ತಣ್ಣೀರಿನ ಸ್ನಾನ ಒಳ್ಳೆಯದು. ಆಹಾರದಲ್ಲಿ ಮಸಾಲ ಪದಾರ್ಥಗಳನ್ನು ಹೆಚ್ಚು ಬಳಸಬಾರದು. ಕಪ್ಪು, ನೀಲಿ ಬಣ್ಣದ ಬಟ್ಟೆ ಧರಿಸಬಾರದು. ಹೆಚ್ಚು ಕಾಟನ್ ಬಟ್ಟೆ ಧರಿಸಬೇಕು. ನೀರಿನ ಅಂಶ ಹೆಚ್ಚಾಗಿರುವ ತರಕಾರಿ/ ಹಣ್ಣುಗಳನ್ನು ಸೇವಿಸುವುದು ಉತ್ತಮ. ಕಾಫಿ/ ಟೀ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿರುವ ಕಾರ್ಬೋನೇಟೆಡ್ ಪಾನೀಯ ಹಾಗೂ ಮದ್ಯಪಾನದಿಂದ ದೂರವಿರಿ. ಬಿಸಿ ಗಾಳಿ ಹಾಗೂ ಅತೀಯಾದ ತಾಪಮಾನದಿಂದ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಅಥವಾ 108/102 ಕರೆ ಮಾಡಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.