Kannada NewsKarnataka NewsLatest

ಪರಬ್ರಹ್ಮನನ್ನ ತಿಳಿದರೆ ಆಗ ಸರ್ವವನ್ನ ತಿಳಿದಂತಾಗುತ್ತದೆ -ಪೇಜಾವರ ಶ್ರೀ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಬೆಳಗಾವಿ ನಗರದ ಸಜ್ಜನರ ಹೃದಯವೆಂಬ ಆಕಾಶದಲ್ಲಿ ತಾಪಗಳನ್ನ ಪರಿಹರಿಸುವ ಸುಧಾಪ್ರವಚನವೆಂಬ ಬೆಳದಿಂಗಳನ್ನು ಶ್ರೀ ಸತ್ಯಾತ್ಮರು ಎಂಬ ಚಂದ್ರಪಸರಿಸಿ , ಬೆಳಗಿಸಿ ಬೆಳಗಾವಿಯನ್ನು ಬೆಳಗಿಸಿದ್ದಾರೆ ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥರು ಇಲ್ಲಿ ತಿಳಿಸಿದರು.

ಇಲ್ಲಿ ಬೆಳಗಾವಿ ನಗರದಲ್ಲಿ ಉತ್ತರಾದಿ ಮಠಾಧೀಶರಾದ ಶ್ರೀಸತ್ಯಾತ್ಮತೀರ್ಥರು ಬಿ.ಕೆ. ಮಾಡೆಲ್ ಸ್ಕೂಲ್ ನಲ್ಲಿ ಹಮ್ಮಿಕೊಂಡಿರುವ ಶ್ರೀಮನ್ಯಾಯಸುಧಾ ಮಂಗಲ ಹಾಗೂ ಶ್ರೀ ಸತ್ಯಪ್ರಮೋದತೀರ್ಥರ ೨೩ನೇಪಾದುಕಾ ಮಹಾಸಮಾರಾಧನೆಯ ಸಮಾರಂಭದಲ್ಲಿ ಭಾಗವಹಿಸಿ ಮೇಲಿನಂತೆ ಸತ್ಯಾತ್ಮರನ್ನ ಕೊಂಡಾಡಿದರು.

ಜ್ಞಾನಾರ್ಜನೆಯ ಮಾರ್ಗದಲ್ಲಿ ಹೊಸ, ಹೊಸ, ಸಂಗತಿಗಳು, ಸಮಾಧಾನಗಳು, ಸಂದೇಹ ನಿವಾರಣೆಯ ಮೂಲಕ ನಮಗೆ ನಿಜವಾದ ತತ್ವ ಯಾವುದು ಎಂದು ಧೃಡವಾಗಿ ತಿಳಿಸಿವೆ. ಕೆಲವು ದಾರ್ಶನಿಕರು ತಿಳಿಸಿದಂತೆ ದೋಷಗಳಿಂದ ಕೂಡಿರುವ ಈ ಜೀವವೇ, ಅಥವಾ ಜಡವಾದ ಈ ಪ್ರಪಂಚವೇ ಆ ಪರಬ್ರಹ್ಮನಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ದೇಶವೇ ಇಲ್ಲ, ಜನಗಳೇ ಇಲ್ಲ, ಸೃಷ್ಟಿ ಇಲ್ಲ, ಪಾಲನೆ ಇಲ್ಲ, ಇದನ್ನೆಲ್ಲಾ ನಡೆಸಲು ಬೇಕಾದ ಶಕ್ತಿ, ಜ್ಞಾನ ,  ಮುಂತಾದ ಗುಣಗಳಿಲ್ಲ ಎಂದು ಆ ಪರಬ್ರಹ್ಮನಿಗೆ ಹೇಳಿದರೆ ಆಗ “ಇವನು ರಾಜ, ಚಕ್ರವರ್ತಿ, ಆದರೆ ಪ್ರಜೆಗಳಿಲ್ಲ, ರಾಣಿಯಿಲ್ಲ, ದೇಶ ಇಲ್ಲ, ಸೈನಿಕರಿಲ್ಲ ಎಂದು ಹೇಳಿದರೆ ಅದು ರಾಜನಿಗೆ ದೋಷ ಹೇಳಿ ಅವಮಾನ ಮಾಡಿಂತೆ ಅಲ್ಲವೇ. ಅದರಂತೆ ಭಗವಂತನಿಗೆ ಅನಂತ ದೋಷ ಹೇಳಿದಂತೆ ಅಲ್ಲವೇ? ಎಂದು ಈ ಶಾಸ್ತ್ರೀಯ ಗ್ರಂಥಗಳ ಮುಖ್ಯ ಆಶಯ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಒಬ್ಬ ಯಾತ್ರಿಕ ಭಾರತವನ್ನೆಲ್ಲಾ ನೋಡಿದ್ದೇನೆ ಎಂದರೆ ಪ್ರತಿ ಮನೆ, ಪ್ರತಿಯೊಂದು ಬೀದಿ ನೋಡಿದ್ದೀನಿ ಅಂತ ಅಲ್ಲ. ಮುಖ್ಯವಾದ ನಗರಗಳನ್ನು ನೋಡಿದ್ದೀನಿ ಎಂದು ಹೇಗೆ ಅರ್ಥವೋ ಹಾಗೆ “ಪರಬ್ರಹ್ಮನನ್ನ ತಿಳಿದರೆ ಆಗ ಸರ್ವವನ್ನ ತಿಳಿದಂತಾಗುತ್ತೆ” ಎಂದು ಹೇಳಿ ಅದನ್ನ ಕೂಡಿಸಲು ಈ ಪ್ರಪಂಚ, ಈ ಜೀವರು, ಇವೆಲ್ಲಾ ಸುಳ್ಳಾಗಿದೆ, ಆಪರಬ್ರಹ್ಮ ಒಂದೇ ಸತ್ಯ, ಎಂಬುದಾಗಿ ಹೀಗೆಲ್ಲಾ ಅರ್ಥಮಾಡಿದರೆ ಎಷ್ಟು ಹಾಸ್ಯಾಸ್ಪದ ಅಲ್ಲವೇ.

“ಪರಬ್ರಹ್ಮನನ್ನು ತಿಳಿದರೆ ಎಲ್ಲವನ್ನು ತಿಳಿದಂತೆ” ಅಂದರೆ ನಾನು ತಿಳಿಯಬೇಕಾದದ್ದರಲ್ಲಿ ಪ್ರಧಾನವಾದದ್ದನ್ನು ತಿಳಿದಿದ್ದೇನೆ ಎಂದು ಅರ್ಥ. ಹೀಗೆ ಸಾವಿರಾರು ಜ್ಞಾನ ಸಂದೇಶಗಳು ಶ್ರೀ ಸತ್ಯಾತ್ಮರು ಪಾಠ, ಪರೀಕ್ಷೆ, ಮಂಗಲಗಳನ್ನ ಮಾಡುತ್ತಿರುವ ಶ್ರೀಮನ್ಯಾಯಸುಧಾ ಗ್ರಂಥದಲ್ಲಿ ಇವೆ. ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶ್ರೀ ಸತ್ಯಾತ್ಮರು, ಪೇಜಾವರ ಸ್ವಾಮಿಗಳು ವಯಸ್ಸಿನಲ್ಲಿ ಜಾಂಬವಂತನಂತೆ ಆದರೂ ಕಾರ್ಯ ಚಟುವಟಿಕೆಯಲ್ಲಿ ೧೬ರ ತರುಣನಂತೆ . ಶ್ರೀಕೃಷ್ಣನಿಗೆ ಪಂಚಮ ಪರ್ಯಾಯ ನಡೆಸಿ ಕೃಷ್ಣಾನುಗ್ರಹದಿಂದ ತರುಣರೇ ಆಗಿದ್ದಾರೆ. ೩೮ ಸುಧಾಮಂಗಲ ನಡೆಸಿದ ಶ್ರೀಗಳು ಈ ನಮ್ಮ ಸುಧಾಮಂಗಲಕ್ಕೆ ಆಗಮಿಸಿದ್ದು ನಮಗೆ ಅತೀವ ಸಂತೋಷ ತಂದಿದೆ ಎಂದು ಅಭಿನಂದಿಸಿದರು.

ಈ ಕಾರ್ಯಕ್ರಮಕ್ಕೆ ಆಗಮಿಸಿದ ಬಂಢಾರಕೆರೆ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥರು ಶ್ರೀ ಸತ್ಯಾತ್ಮತೀರ್ಥರನ್ನ ಅಭಿನಂದಿಸಿ ಶ್ರೀಗಳು ನಡೆಸುತ್ತಿರುವ ಈ ಸುಧಾಮಂಗಲ ಒಂದು ಸಮರ. ಇಲ್ಲಿ ಅವರ ವಿದ್ಯಾರ್ಥಿ ಶಿಷ್ಯರೇ ಸೈನಿಕರು. ತಮ್ಮ ಜ್ಞಾನ ಸಂದೇಶಗಳೆಂಬ ಗದಾ ಬಾಣಗಳಿಂದ ವಿದ್ವಾಂಸರ ಸಕಲ ಪ್ರಶ್ನೆಗಳಿಗೆ ಉತ್ತರಗಳನ್ನ ಕೊಟ್ಟು, ಕೊಡಿಸುವ, ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮರು ತಮ್ಮ ಮಠದ ಹೆಸರನ್ನ ಅನ್ವರ್ಥಕ ಮಾಡಿದ್ದಾರೆ ಎಂದು ಬಣ್ಣಿಸಿದರು.

ಜನಮನ ಸೆಳೆದ ರೂಪಕ ಶ್ರೀಕೃಷ್ಣ ಲೀಲಾ


ಬಿ. ಕೆ. ಮಾಡೆಲ್ ಹಾಸ್ಕೂಲಿನ ಹೊರ ಆವರರಣದಲ್ಲಿ ಹಾಕಲಾಗಿರುವ ಭವ್ಯ ವೇದಿಕೆಯಲ್ಲಿ ಎಂಟು ದಿನಗಳ ಕಾಲ ನಗರದ ಪಾದುಕಾ ಮಹಾಸಮಾರಾದನೆ ಸೇವಾ ಸಮಿತಿಯವರು ಹಮ್ಮಿಕೊಂಡಿರುವ ಶ್ರೀಮತ್ ಅನುವ್ಯಾಖ್ಯಾನ ಶ್ರೀಮನ್‌ನ್ಯಾಯಸುಧಾ ಮಂಗಲ ಮಹೋತ್ಸವ (ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ) ಹಾಗೂ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೩ ನೇ ಪಾದುಕಾ ಮಹಾಸಮಾರಾಧನೆಯ ಸಂದರ್ಭದಲ್ಲ ಸಾಂಸ್ಕೃತಿಕ ಕಾರ‍್ಯಕ್ರಮದಲ್ಲಿ ವೇಣುಗೋಪಾಲ ಭಜನಾ ಮಂಡಳಿಯವರು ಅಭಿನಯಿಸಿದ ಶ್ರೀ ಕೃಷ್ಣಲೀಲಾ ರೂಪಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ರೂಪಾ ಹೊನ್ನಂಗಿ(ಕೃಷ್ಣ), ಮೀರಾ ದೇಶಪಾಂಡೆ(ರಾಧಾ), ಅವಧಾನಿ(ಯಶೋಧಾ). ಗೋಪಿಕೆಯರಾಗಿ ಮಂದಾ ಗುಂಡೇನಟ್ಟಿ, ಕಲ್ಪನಾ ಕಾಕಡೆ, ಉಮಾ ಕುಲಕರ್ಣಿ, ಪ್ರಿಯಾ ಗುಮಾಸ್ತೆ, ಲಕ್ಷ್ಮೀ ಬಿಜಾಪೂರೆ, ಅನುಷಾ ದೇಶಪಾಂಡೆ, ಸರಿತಾ ಕುಲಕರ್ಣಿ, ಸವಿತಾ ಕುಲಕರ್ಣಿ. ದಾಸರಾಗಿ ನೇತ್ರಾ ಕಿತ್ತೂರ , ಪಂಕಜಾ, ಶೈಲಜಾ ನೇರ್ಲೆಕರ, ಅಲ್ಲದೇ ರಾಧಾ ಗುಮಾಸ್ತೆ, ಮಾಧುರಿ ಕುಲಕರ್ಣಿ, ವಸುಧಾ ಖಾಸಬಾಗ ನೈಜ ಅಭಿನಯದಿಂದ ಎಲ್ಲ ಮನ ಗೆಲ್ಲುವಲ್ಲಿ ಯಶಸ್ವಿಯಾದರು.

ಅಂಜನಾ ದೇಶಪಾಂಡೆ ಈ ನಾಟಕನ್ನು ಬರೆದು ನಿರ್ದೇಶನ ನೀಡುವುದರೊಂದಿಗೆ ಪಾತ್ರವೊಂದರಲ್ಲಿ ಕಾಣಿಸಿಕೊಂಡರು. ಸವಿತಾ ಕುಲಕರ್ಣಿ ಹಾಗೂ ವಿದ್ಯಾ ಜಾಗಿರದಾರ ನಿರೂಪಿಸಿದರು. ಪುಷ್ಪಾ ಉಡುಪಿ ನೇತೃತ್ವ ವಹಿಸಿದ್ದರು.

ಸ್ವರಸಾಧನ ಕಲಾತಂಡದವರಿಂದ ಭರತ ನಾಟ್ಯ, ಪ್ರೇರಣಾ ಪ್ರೀತಿ ಭಜನಾ ಮಂಡಳಿಯರಿಂದ ’ಹರಿವಾಯು ಸೇವಾ’ ರೂಪಕ ಹಾಗೂ ಲಕ್ಷ್ಮೀ ಶೋಭಾನ ಭಜನಾ ಮಂಡಳಿಯವರಿಂದ ಕೋಲಾಟಗಳು ಜನರನ್ನು ರಂಜಿಸುವಲ್ಲಿ ಯಶಸ್ವಿಯಾದವು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button