World

*ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ*

ಉಗ್ರವಾದವನ್ನು ಶುದ್ಧ ಮಾಡುವವರೆಗೂ ಶಾಂತಿಯ ಮಾತು ಇಲ್ಲ

ಪ್ರಗತಿವಾಹಿನಿ ಸುದ್ದಿ: ಭಯೋತ್ಪಾದನೆ ನಿಲ್ಲಿಸದಿದ್ದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ. ‘ನೀರು ಮತ್ತು ರಕ್ತ ಒಂದೇ ಹಾದಿಯಲ್ಲಿ ಹರಿಯುವುದಿಲ್ಲ’. ವ್ಯಾಪಾರ ಮತ್ತು ಉಗ್ರವಾದ ಜೊತೆಗಿರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನದ ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಳಿಕ ಇದೇ ಮೊದಲ ಬಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪಾಕಿಸ್ತಾನ ಉಗ್ರವಾದವನ್ನು ಶುದ್ಧಮಾಡಬೇಕು. ಅಲ್ಲಿಯವರೆಗೆ ಶಾಂತಿಯ ಯಾವುದೇ ಮಾತು ಇಲ್ಲ ಎಂದು ಖಡಕ್ ಆಗಿ ಹೇಳಿದರು.

ಉಗ್ರರು, ಉಗ್ರರಿಗೆ ಬೆಂಬಲ ನೀಡುವುದು ಎರಡೂ ಒಂದೇ. ‘ಆಪರೇಷನ್ ಸಿಂಧೂರ್’ ಒಂದು ಮಾನದಂಡದಂತಿದೆ. ‘ಮೇಡ್ ಇನ್ ಇಂಡಿಯಾ’ ರಕ್ಷಣಾ ವ್ಯವಸ್ಥೆಯ ಸಮಯ ಬಂದಿದೆ. ಪಾಕಿಸ್ತಾನ ಬದುಕಬೇಕು ಅಂದ್ರೆ ಉಗ್ರವಾದ ನಿಲ್ಲಿಸಬೇಕು. ಭಯೋತ್ಪಾದನೆ ನಿಲ್ಲಿಸದಿದ್ರೆ ಪಾಕ್ ಗೆ ಉಳಿಗಾಲವಿಲ್ಲ. ಪಾಕ್ ಸರ್ಕಾರ ಮತ್ತು ಸೇನೆ ಉಗ್ರರನ್ನು ಪೋಷಿಸುತ್ತಿದೆ. ಉಗ್ರರಿಗೆ ಬೆಂಬಲ ಪಾಕಿಸ್ತಾನಕ್ಕೆ ತಿರುಗುಬಾಣವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Home add -Advt

ಇದೇ ವೇಳೆ ಅಣ್ವಸ್ತ್ರ ದಾಳಿ ನಡೆಸುವ ಪಾಕಿಸ್ತಾನದ ಬೆದರಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಯಾವುದೇ ನ್ಯೂಕ್ಲಿಯರ್ ಬ್ಲ್ಯಾಕ್ ಮೇಲ್ ಗಳಿಗೆ ಹೆದರುವುದಿಲ್ಲ. ಯಾವುದೇ ಸಂದರ್ಭದಲ್ಲಿಯೂ ದೇಶದ ನಾಗರಿಕರನ್ನು ರಕ್ಷಿಸುತ್ತೇವೆ. ಭಯೋತ್ಪಾದಕರ ದಾಳಿಗೆ ಭಾರತ ತಕ್ಕ ಉತ್ತರ ನೀಡಿದೆ. ಯುದ್ಧದ ಮೈದಾನದಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ್ದೇವೆ ಎಂದರು.

ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಯಾಗಿದೆ. ವಿಜ್ಞಾನಿಗಳು ಮತ್ತು ಸೈನಿಕರಿಗೆ ನಾನು ಸೆಲ್ಯೂಟ್ ಹೇಳುತ್ತೇನೆ. ಆಪರೇಷನ್ ಸಿಂಧೂರವನ್ನು ಸೈನಿಕರು ಯಶಸ್ವಿಗೊಳಿಸಿದ್ದಾರೆ. ದೇಶದ ಪ್ರತಿ ತಾಯಿ, ಸಹೋದರಿಗೂ ಈ ಪರಾಕ್ರಮ ಸಮರ್ಪಣೆ ಎಂದು ಹೇಳಿದರು.

ಉಗ್ರರ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನ ಕನಸು ಮನಸಿನಲ್ಲಿಯೂ ಊಹಿಸದ ರೀತಿಯಲ್ಲಿ ತಿರುಗೇಟು ನೀಡಿದ್ದೇವೆ. ಸಿಂಧೂರ ಅಳಿಸಿದರೆ ಏನಾಗುತ್ತದೆ ಎಂಬುದು ಪಾಕಿಸ್ತಾನಕ್ಕೆ ಗೊತ್ತಾಗಿದೆ. ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದೇವೆ. ಭಾರತದ ದಾಳಿಗೆ ಹೆದರಿ ಪಾಕಿಸ್ತಾನ ರಕ್ಷಣೆಯ ಮೊರೆ ಹೋಯಿತು. ಭಾರತೀಯ ಸೇನಾ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಅಷ್ಟೇ. ಆದರೆ ಭಯೋತ್ಪಾದನೆಯ ವಿರುದ್ಧ ಹೋರಾಟ ಎಂದೂ ನಿಲ್ಲುವುದಿಲ್ಲ ಎಂದು ಗುಡುಗಿದರು.

ಪಾಕಿಸ್ತಾನದ ಜೊತೆ ಮಾತು ನಡೆಯಬೇಕಂದ್ರೆ ಅದು ಉಗ್ರವಾದ ನಿರ್ಮೂಲನೆಗೆ ಮಾತ್ರ, ಪಾಕ್ ಜೊತೆ ಮಾತುಕತೆ ನಡೆಯುವುದಾದರೆ ಅದು ಪಿಒಕೆ ಬಗ್ಗೆ ಮಾತ್ರ ಎಂದು ಹೇಳಿದರು. ಪಾಕಿಸ್ತಾನ ಏನು ಮಾಡಲಿದೆ ಎಂಬುದನ್ನು ಗಮನಿಸುತ್ತೇವೆ ಎಂದು ಹೇಳಿದರು.

Related Articles

Back to top button