
ಪ್ರಗತಿವಾಹಿನಿ ಸುದ್ದಿ: ಸಿದ್ದರಾಮಯ್ಯ ಪ್ರತಿ ಬಾರಿ ಐದು ವರ್ಷ ನಾನೇ ಸಿಎಂ ಅಂದಾಗ ಅನುಮಾನ ಹೆಚ್ಚು ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರು ಐದು ವರ್ಷಕ್ಕೆ ಇವರನ್ನು ಆಯ್ಕೆ ಮಾಡಿದ್ದಾರೆ ಉತ್ತಮ ಆಡಳಿತ ಮಾಡಿಬೇಕು. ಮೊನ್ನೆ ಸಿದ್ದರಾಮಯ್ಯ ನವರು ನಾವು (ಬಂಡೆ ನಾವು) ಅಂದರು. ಇಂದು ನಾನು ಅನ್ನುತ್ತಿದ್ದಾರೆ. ಏನು ಬೆಳವಣಿಗೆ ಆಗಿದೆ. ಅವರು ಎಷ್ಟು ಬಾರಿ ಹೇಳುತ್ತಾರೋ ಅಷ್ಟು ಸಂಶಯ ಹೆಚ್ಚಾಗುತ್ತದೆ. ನಾಯಕತ್ವ ಬದಲಾವಣೆ ಅಂತಾ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ, ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರು ಹೇಳುತ್ತಿದ್ದಾರೆ ಎಂದು ಹೇಳಿದರು.
ಅಭಿವೃದ್ಧಿ ಶೂನ್ಯ
ಕಾಂಗ್ರೆಸ್ ಒಳ ಜಗಳದಿಂದ ರಾಜ್ಯ ಅಭಿವೃದ್ಧಿ ಶೂನ್ಯ ಆಗಿದೆ, ಆಡಳಿತ ಕುಸಿದಿದೆ. ಭ್ರಷ್ಟಾಚಾರ ಹೆಚ್ಚಿದೆ, ರಾಜ್ಯದಲ್ಲಿ ಮಳೆ ಬರುತ್ತಿದೆ. ರೈತರಿಗೆ ಸೂಕ್ತ ಪರಿಹಾರ ಇಲ್ಲ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಕುರ್ಚಿಗಾಗಿ ಕಚ್ಚಾಟ ನಡೆಯುತ್ತಿದೆ. ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ಕೊಡಲು ಆಗುತ್ತಿಲ್ಲ. ಸಮೃದ್ಧ ಕರ್ನಾಟಕ ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ. ಇವರಿಗೆ ಈಗಾಗಲೇ ಜನರು ಶಾಪ ಹಾಕುತ್ತಿದ್ದಾರೆ. ಇನ್ನೂ ಎರಡುವರೆ ವರ್ಷ ಆದರೂ ಉತ್ತಮ ಆಡಳಿತ ನೀಡಿ. ನಿಮ್ಮ ಕೈಯಲ್ಲಿ ಆದರೆ ಆಡಳಿತ ಮಾಡಿ ಇಲ್ಲದಿದ್ದರೆ ಮನೆಗೆ ಹೋಗಿ ಎಂದು ವಾಗ್ದಾಳಿ ನಡೆಸಿದರು.
ಮಧ್ಯಂತರ ಚುನಾವಣೆ
ಬಿಜೆಪಿ ವಿಪಕ್ಷವಾಗಿ ಎಲ್ಲವನ್ನು ಗಮನಿಸುತ್ತಿದೆ. ಆಡಳಿತ ಪಕ್ಷದ ತಪ್ಪು ಮಾಡಿದಾಗ ವಿಪಕ್ಷವಾಗಿ ಸರಿಯಾಗಿ ಕೆಲಸ ಮಾಡುತ್ತಿದೆ.
ಐದು ವರ್ಷ ಸರ್ಕಾರ ಇರುತ್ತೆ ಅಂತಾ ನಾವು ಕೊನೆಯಲ್ಲಿ ತಪ್ಪು ಹಿಡಿಯುವ ಕೆಲಸ ಮಾಡೊಣ ಅಂದರೆ ಇಲ್ಲಿ ಎರಡು ವರ್ಷಕ್ಕೆ ಹಲವು ತಪ್ಪುಗಳು ಆಗಿವೆ. ಹೀಗಾಗಿ ಇದೆಲ್ಲ ನೋಡುತ್ತಿದ್ದರೇ 2026 ಕ್ಕೆ ಮಧ್ಯಂತರ ಚುನಾವಣೆ ಬರಲಿದೆ.
ಇದೆಲ್ಲಾ ನೋಡಿದಾಗ ಸರ್ಕಾರ ಉಳಿಯೋದು ಕಷ್ಟ. ಕಾಂಗ್ರೆಸ್ ಹೈಕಮಾಂಡ್ ದುರ್ಬಲ ಇದೆ. ಸರ್ಕಾರ ಬೀಳಲಿದೆ.
ಸರ್ಕಾರ ಬಿದ್ದ 6 ತಿಂಗಳಿಗೆ ಚುನಾವಣೆ ಬರಲಿದೆ. ಮಾಧ್ಯಮಗಳಲ್ಲಿ ಕೂಡ ಇದೇ ಚರ್ಚೆ ಆಗುತ್ತಿದೆಯಲ್ಲ.
ಸರ್ಕಾರದಲ್ಲಿ ವಿಶ್ವಾಸ ಇಲ್ಲ ಅಂತಾ ನಮಗೂ ರಾಜಕೀಯ ಅನುಭವ ಇದೆ ಹಾಗೇ ಅನಿಸುತ್ತಿದೆ ಎಂದು ಹೇಳಿದರು.
ಗೊಂದಲ ಇಲ್ಲ
ರಾಜ್ಯ ಬಿಜೆಪಿಯಲ್ಲಿ ಗೊಂದಲ ಇದೆಯಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ನೇಮಕವನ್ನು ಕೇಂದ್ರಿಯ ನಾಯಕರು ಅಂತಿಮ ನಿರ್ಧಾರ ಮಾಡಲಿದ್ದಾರೆ. ಮಾಜಿ ಸಚಿವ ಶ್ರೀರಾಮುಲು ಅವರ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ. ಇದು ಹೈಕಮಾಂಡ್ ಹೇಳಬೇಕು. ಈ ವಿಚಾರದಲ್ಲಿ ಹೈಕಮಾಂಡ್ ತಿರ್ಮಾನವೇ ಅಂತಿಮ. ಪ್ರಧಾನಿ ನರೇಂದ್ರ ಮೋದಿ ವಿದೇಶದಿಂದ ವಾಪಸ್ ಬಂದ ಬಳಿಕ ಘೋಷಣೆ ಆಗುವ ಸಾಧ್ಯತೆ ಇದೆ. ವಿಧಾನಸಭೆ ವಿಪಕ್ಷ ಸ್ಥಾನ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.
ನಾಯಕರ ಭೇಟಿಗೆ ಸಮಯ
ತಾವು ಹೈಕಮಾಂಡ್ ನಾಯಕರ ಭೇಟಿಗೆ ಸಮಯ ಕೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಸಮಯ ಕೇಳಿದ್ದೆ ಇನ್ನೂ ಭೇಟಿ ಆಗಿಲ್ಲ.
ಕೆಲವು ವಿಚಾರ ಇದೆ ಹೀಗಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಅವಕಾಶ ಕೇಳಿದ್ದೇನೆ. ಸೈನಿಕ ಶಾಲೆಗಾಗಿ ಮನವಿ ಮಾಡಲು ಭೇಟಿಗೆ ಸಮಯ ಕೇಳಿದ್ದೇನೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್, ಉನ್ನತ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಹಾಗೂ ಕೇಂದ್ರ ಗೃಹ ಅಮಿತ್ ಷಾ ಭೇಟಿಗೆ ಅವಕಾಶ ಕೇಳಿದ್ದೇನೆ ಎಂದು ಹೇಳಿದರು.
ಸ್ವತಂತ್ರ ಸಂಸ್ಥೆಯಿಂದ ಸಮೀಕ್ಷೆ
ರಾಜ್ಯ ಸರ್ಕಾರ ನಡೆಸುತ್ತಿರುವ ಒಳ ಮೀಸಲಾತಿ ಕುರಿತು ಕೇಳಿದ ಪ್ರಶ್ನೆಗೆ ಒಳ ಮೀಸಲಾತಿ ಸಮೀಕ್ಷೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಜಾತಿ ಅನ್ನುವುದು ಬಹಳ ಸೂಕ್ಷ್ಮ ವಿಚಾರ. ಎಲ್ಲರನ್ನೂ ವಿಶ್ವಾಸ ತೆಗೆದುಕೊಂಡು ಸಮೀಕ್ಷೆ ಮಾಡಬೇಕು. ಮೊದಲು ಆನ್ ಲೈನ್ ಮಾಡಿ ಬಳಿಕ ಅಗತ್ಯ ಇದ್ದರೆ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಲಿ. ಇದರಿಂದ ಬಹಳ ಸಮಸ್ಯೆ ಆಗಲಿದೆ. ಆ ಸಮುದಾಯವನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸಮೀಕ್ಷೆ ಮಾಡಬೇಕು. ಸುಮ್ಮನೆ ಹೋಗಿ ನಾವು ಸಮೀಕ್ಷೆ ಮಾಡಿದ್ದೇವೆ ಅಂತಾ ಚೀಟಿ ಅಂಟಿಸಿದರೆ ಹೇಗೆ ಇದು ಸಮೀಕ್ಷೆ ಮಾಡುವ ರೀತಿ ಅಲ್ಲ. ಸ್ವತಂತ್ರ ಸಂಸ್ಥೆಯಿಂದ ಸಮೀಕ್ಷೆ ಮಾಡಬೇಕು, ಸದ್ಯ ಮಾಡುತ್ತಿರುವ ಸಮೀಕ್ಷೆ ಸರಿಯಲ್ಲ. ಇದು ತೊಂದರೆ ಆಗಲಿದೆ ಎಂದು ಹೇಳಿದರು.