
ಪ್ರಗತಿವಾಹಿನಿ ಸುದ್ದಿ: ದುಷ್ಟರಿಂದ ರಕ್ಷಿಸಬೇಕಾದ ಅಪ್ಪನೇ ಮಗಳ ಮೇಲೆ ಅತ್ಯಾಚಾರವೆಸಗಿರುವ ಹೇಯ ಘಟನೆ ಬೆಳಕಿಗೆ ಬಂದಿದೆ.
ಸಮಾಜದ ಕೆಟ್ಟ ಕಣ್ಣುಗಳು, ದುಷರಿಂದ ಮಗಳಿಗೆ ರಕ್ಷಣೆ ನೀಡಿ ಧೈರ್ಯ ತುಂಬಬೇಕಾದ ಅಪ್ಪನೇ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದರೆ ಆಕೆ ಯಾರ ರಕ್ಷಣೆ ಕೇಳಬೇಕು? ತೆಲಂಗಾಣದಲ್ಲಿ ಇಂತದ್ದೇ ಒಂದು ಹೇಯ ಕೃತ್ಯವನ್ನು ತಂದೆಯೊಬ್ಬ ಎಸಗಿದ್ದಾನೆ.
ಕುಡಿದ ಮತ್ತಿನಲ್ಲಿ ತಂದೆಯೊಬ್ಬ ತನ್ನ ಮಗಳ ಮೇಲೆಯೇ ಅತ್ಯಾಚಾರವೆಸಗಿರುವ ಘಟನೆ ತೆಲಂಗಾಣದ ನಾರಾಯಣಪೇಟೆಯಲ್ಲಿ ನಡೆದಿದೆ. ಮರಿಕಲ್ ಮಂಡಲ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹಾಸ್ಟೆಲ್ ನಲ್ಲಿದ್ದು ಐದನೇ ತರಗತಿ ಓದುತ್ತಿದ್ದ ಮಗಳಿಗೆ ಇತ್ತೀಚೆಗೆ ನಾಯಿ ಕಡಿದಿತ್ತು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಬಳಿಕ ಮನೆಗೆ ಹೋಗಿದ್ದಳು. ಮನೆಯಲ್ಲಿ ಎರಡು ದಿನ ವಿಶ್ರಾಂತಿ ಪಡೆದು ಓದುತ್ತಿದ್ದಳು. ತಾಯಿ ಕೆಲಸಕ್ಕೆಂದು ಹೋಗಿದ್ದಾಗ ಮಗಳು ಮನೆಯಲ್ಲಿ ಒಬ್ಬಳೇ ಇರುವುದನ್ನು ಗಮನಿಸಿದ ತಂದೆ ಕುಡಿದು ಬಂದು ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಅಪ್ಪ ನನಗೇನೂ ಮಾಡಬೇಡಿ, ನಿಮ್ಮ ಕಾಲಿಗೆ ಬೀಳುತ್ತೇನೆ ಎಂದು ಮಗಳು ಅಂಗಲಾಚಿ ಬೇಡಿದರೂ ದುಷ್ಟನ ಮನಸ್ಸು ಕರಗಿಲ್ಲ, ಮಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ್ದಾನೆ. ಬಾಲಕಿಯ ಕಿರುಚಾಟ, ಚೀರಾಟ ಕೇಳಿದ ಅಕ್ಕಪಕ್ಕದ ಮನೆಯವರು ಮನೆ ಬಳಿ ಬಂದು ನೋಡಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ತಾಯಿಗೆ ವಿಷಯ ತಿಳಿಸಿದ್ದಾರೆ.
ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿ ತಂದೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ತಂದೆ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.