
ಪ್ರಗತಿವಾಹಿನಿ ಸುದ್ದಿ: ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಗೆ ಸ್ಟಾಫ್ ನರ್ಸ್ ಹೆರಿಗೆ ಮಾಡಿಸಲು ಮುಂದಾದ ಪರಿಣಾಮ ತೀವ್ರ ರಕ್ತಸ್ರಾವದಿಂದ ಬಾಣಂತಿ ಹಾಗೂ ಮಗು ಇಬ್ಬರೂ ಕೂಡ ಸಾವನ್ನಪ್ಪಿರುವ ಘಟನೆ ರಾಯಚೂರಿನ ದೇವದುರ್ಗ ಪಟ್ಟಣದಲ್ಲಿ ನಡೆದಿದೆ.
ಮೃತ ಬಾಣಂತಿಯನ್ನು ಅರಕೇರಾ ತಾಲೂಕಿನ ಭೋಗಿ ರಾಮನಗುಂಡ ಗ್ರಾಮದ ಶಿವಮ್ಮ(29) ಎಂದು ಗುರುತಿಸಲಾಗಿದೆ. ಗರ್ಭಿಣಿಯಾಗಿದ್ದ ಶಿವಮ್ಮ ಪ್ರತಿ ತಿಂಗಳು ದೇವದುರ್ಗ ಸಾರ್ವಜನಿಕ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು.
ಎಂದಿನಂತೆ ತಪಾಸಣೆಗೆ ಆಸ್ಪತ್ರೆಗೆ ಬಂದಿದ್ದ ವೇಳೆ ಶಿವಮ್ಮಗೆ ದಿಢೀರ್ ಆಗಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಸ್ಟಾಫ್ ನರ್ಸ್ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಈ ವೇಳೆ ತೀವ್ರ ರಕ್ತಸ್ರಾವವಾಗಿದ್ದು ವೈದ್ಯರಿಗೆ ವಿಷಯ ತಿಳಿಸಿದ್ದಾರೆ. ಈ ವೇಳೆ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಶಿವಮ್ಮರನ್ನು ಕಳುಹಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಮಾರ್ಗಮಧ್ಯದಲ್ಲೇ ತಾಯಿ, ಮಗು ಮೃತಪಟ್ಟಿದ್ದಾರೆ.
ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಕಿದ್ದರೆ ಶಿವಮ್ಮ ಬದುಕುತ್ತಿದ್ದರು. ದೇವದುರ್ಗ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯವೇ ಬಾಣಂತಿ ಸಾವಿಗೆ ಕಾರಣವೆಂದು ಮೃತರ ಸಹೋದರ ಆರೋಪಿಸಿದ್ದಾರೆ.