*ಲೀಡ್ ಬ್ಯಾಂಕ್ ಸಭೆ ನಡೆಸಿದ ಜಗದೀಶ್ ಶೆಟ್ಟರ್: ನಿಯಮಾನುಸಾರ ಶೀಘ್ರದಲ್ಲಿ ಸಾಲ ಮಂಜೂರು ಮಾಡಲು ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯ ವಿವಿಧ ಇಲಾಖೆಗಳ ಯೋಜನೆಗಳಡಿಯಲ್ಲಿ ಬ್ಯಾಂಕುಗಳಲ್ಲಿ ಸಲ್ಲಿಕೆಯಾದ ಸಾಲದ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿಗೊಳಿಸಿ ಅರ್ಹರಿಗೆ ಸಾಲ ಮಂಜೂರು ಮಾಡಬೇಕು ಎಂದು ಜಿಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ಲೋಕ ಸಭಾ ಸಂಸದರಾದ ಜಗದೀಶ್ ಶೆಟ್ಟರ್ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಸೋಮವಾರ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಹಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಬ್ಯಾಂಕುಗಳಿಗೆ ಸಲ್ಲಿಕೆಯಾದ ಅರ್ಜಿಗಳನ್ನು ವಿನಾಕಾರಣ ವಿಳಂಬ ಮಾಡದೇ ಸಾಲವನ್ನು ಮಂಜೂರ ಮಾಡುವ ಮೂಲಕ ಸರ್ಕಾರಿ ಯೋಜನೆಯ ನೆರವನ್ನು ಒದಗಿಸುವಂತೆ ಸೂಚಿಸಿದರು.
PMJJBY, PMSBY & APY ಕಾರ್ಯಕ್ರಮಗಳನ್ನು ಹೆಚ್ಚಿನ ಮಟ್ಟದಲ್ಲಿ ಜನರಿಗೆ ತಲುಪುವಂತೆ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಮತ್ತು ರೈತರ ಬೆಳದಂತಹ ಫಸಲುಗಳನ್ನು ನೈಸರ್ಗಿಕ ವಿಕೋಪಕಗಳಿಂದ ಕಾಪಾಡಿಕೊಳ್ಳಲು ಕಡ್ಡಾಯವಾಗಿ ಎಲ್ಲ ರೈತರನ್ನು ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆಯಡಿ ಒಳಗೊಳ್ಳುವಂತೆ ಮಾಡಿ ರೈತರು ಎಲ್ಲ ಕಾರ್ಯಕ್ರಮಗಳ ಸುದುಪಯೋಗ ಪಡೆದುಕೊಳ್ಳುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಸಂಸದ ಜಗದೀಶ್ ಶೆಟ್ಟರ್ ತಿಳಿಸಿದರು.
ಇದೇ ವೇಳೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ, ವಿವಿಧ ಇಲಾಖೆಗಳಡಿ ಸ್ವೀಕರಿಸಿದ ಸಾಲ ಮಂಜೂರಾತಿ ಅರ್ಜಿಗಳನ್ನು ನಿಯಮಾನುಸಾರ ತ್ವರೀತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಟ್ಟದ ಎಲ್ಲ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ದರೋಡೆ ಹಾಗೂ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಇವುಗಳನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ಬ್ಯಾಂಕ್ ಸುರಕ್ಷತೆ ಬಗ್ಗೆ ಕಾಳಜಿ ವಹಿಸತಕ್ಕದ್ದು. ಕರ್ನಾಟಕ ಸರ್ಕಾರದ ನಿರ್ದೇಶನದಂತೆ ಎಲ್ಲ ಬ್ಯಾಂಕುಗಳಲ್ಲಿ ಸಿಬ್ಬಂದಿಗಳು ಜನ ಸಾಮಾನ್ಯರ ಅನುಕೂಲವಾಗುಂತೆ ಆದಷ್ಟು ಕನ್ನಡ ಭಾಷೆಯಲ್ಲಿ ವ್ಯವಹರಿಸುವಂತೆ ಜಿ.ಪಂ ರಾಹುಲ್ ಶಿಂಧೆ ತಿಳಿಸಿದರು.
ಲೀಡ್ ಬ್ಯಾಂಕ್ ಪ್ರಾದೇಶಿಕ ಮ್ಯಾನೇಜರ್ ಪ್ರಶಾಂತ ಘೋಡಕೆ ಮಾತನಾಡಿ ಜೂನ್ ಅಂತ್ಯದವರೆಗೆ ಜಿಲ್ಲೆಯ ಎಲ್ಲ ಬ್ಯಾಂಕ್ಗಳು ಸೇರಿ ಕೃಷಿ ಕ್ಷೇತ್ರಕ್ಕೆ ರೂ. 1406 ಕೋಟಿ, ಕೈಗಾರಿಕ ಕ್ಷೇತ್ರಕ್ಕೆ 2653.27 ಕೋಟಿ, ಶೈಕ್ಷಣಿಕ ಕ್ಷೇತ್ರಕ್ಕೆ ರೂ. 13.57 ಕೋಟಿ, ಗೃಹಸಾಲ 75.03 ಕೊಟಿ ಸೇರಿದಂತೆ ಒಟ್ಟು 10801.80 ಕೋಟಿ ಸಾಲವನ್ನು ವಿತರಿಸಿರುವುದಾಗಿ ಸಭೆಗೆ ತಿಳಿಸಿದರು ಹಾಗೂ ಪ್ರಸಕ್ತ ವರ್ಷದಲ್ಲಿ 36237.48 ಕೋಟಿ ಸಾಲ ವಿತರಣೆ ಗುರಿ ಹೊಂದಲಾಗಿದೆ ಎಂದರು.
ಸಭೆಯ ಬಳಿಕ ರಾಷ್ಟ್ರೀಯ ಗ್ರಾಮೀಣ ಜಿವನೋಪಾಯ ಅಭಿಯಾನದಡಿಯಲ್ಲಿ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರು ಉತ್ಪಾದಿಸುವ ಶಾವಿಗೆಯನ್ನ “ಬೆಳಗಾವಿ ಸಂಜೀವಿನಿ ಶಾವಿಗೆ” ಎಂಬ ಶೀರ್ಷಿಕೆಯಲ್ಲಿ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರ ರವಿ ಎನ್ ಬಂಗಾರೆಪ್ಪನವರ, ಆರ್.ಬಿ.ಐ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಆರ್. ಪ್ರಭಾಕರ, ನಬಾರ್ಡ ಅಧಿಕಾರಿ ಅಭಿನವ ಯಾಧವ್ ಹಾಗೂ ಎಲ್ಲಾ ಜಿಲ್ಲಾ ಬ್ಯಾಂಕ್ ಅಧಿಕಾರಿಗಳು ಮತ್ತು ಅನುಷ್ಠಾನ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.