Belagavi NewsBelgaum NewsKannada NewsKarnataka News

*ನಿಲ್ಲದ ಕಬ್ಬಿನ ಹೋರಾಟ: ಹಲವೆಡೆ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ರೈತರ ನಿರಂತರ ಹೋರಾಟದ ಫಲವಾಗಿ ಸರ್ಕಾರ 1 ಟನ್ ಕಬ್ಬಿಗೆ 3,300 ರೂ. ದರ ನಿಗದಿ ಮಾಡಿದೆ. ಆದರೆ ಇದಕ್ಕೆ ಒಪ್ಪದ ಬೈಲಹೊಂಗಲ ಹಾಗೂ ಮುಧೋಳ ರೈತರು ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಲೆ ಕೊಡಲೇಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತೀ ಟನ್ ಕಬ್ಬಿಗೆ ಸೂಕ್ತ ಬೆಲೆ ಬೇಕೇ ಬೇಕು ಎಂದು ಆಗ್ರಹಿಸಿ ಮುಧೋಳ ಭಾಗದ ರೈತರು ಪಟ್ಟು ಹಿಡಿದಿದ್ದಾರೆ. ಇತ್ತ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಶನಿವಾರವೂ ಬಂದ್ ಮಾಡಲಾಗಿತ್ತು.‌

ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ರೈತರು ಧರಣಿ ನಡೆಸುತ್ತಿದ್ದಾರೆ. ನಮಗೆ ಈ ಬೆಲೆ ಇಷ್ಟವಿಲ್ಲ. ಇದು ಸಾಕಾಗಲ್ಲ ಸರ್ಕಾರ ರಿಕವರಿ ಆಧಾರದ ಮೇಲೆ ನಿಗದಿ ಮಾಡಿರುವ ಬೆಲೆ ನಮಗೆ ಬೇಡ. ರಿಕವರಿಯಲ್ಲೇ ರೈತರಿಗೆ ಮಹಾ ಮೋಸ ನಡೆಯುತ್ತಿದೆ. ಹೀಗಾಗಿ ನಮಗೆ ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಲೆ ಕೊಡಲೇಬೇಕು. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಆಗ್ರಹಿಸಿದ್ದಾರೆ.

ನಾವು ಕೇಳಿದ್ದು 3,500 ರೂ. ಸರ್ಕಾರ ಘೋಷಣೆ ಮಾಡಿದ್ದು 3,300 ರೂ. ಅದರಲ್ಲೂ ಸರ್ಕಾರದಿಂದ 50-50 ಘೋಷಣೆ ಮಾಡಿದೆ. ಇದು ಭಿಕ್ಷೆಯೇ? ಎಂದು ಗರಂ ಆದ ರೈತರು ಇದನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಹೋರಾಟ ಕೈ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

Home add -Advt

ಜಿಲ್ಲೆಯ ಕಾರ್ಖಾನೆ ಮಾಲೀಕರು ಭಾನುವಾರ ಸಂಜೆಯೊಳಗೆ ಸೌಜನ್ಯದಿಂದ ನಮ್ಮ ವೇದಿಕೆಗೆ ಬಂದು ನಮ್ಮ ಜೊತೆ ಚರ್ಚಿಸಿ ದರ ಮಾತಾಡಬೇಕು. ನಮಗೆ ಬರಬೇಕಿದ್ದ ಬಾಕಿ ಹಣ ಪಾವತಿಸಬೇಕು, ಜೊತೆಗೆ ಟನ್‌ಗೆ 3,500 ರೂ. ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಒಂದು ವೇಳೆ ಇದಕ್ಕೆ ಒಪ್ಪದೇ ಇದ್ದರೆ ನಮ್ಮ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ. ಗಾಂಧಿ ತತ್ವದ ರೈತರು, ಶುಭಾಷ್ ಚಂದ್ರ ಬೋಸ್ ರೀತಿಯಲ್ಲಿ ನಾವು ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೈಳಹೊಂಗಲದಲ್ಲಿ ಭಾರಿ ಆಕ್ರೋಶ

ರಿಕವರಿ ಆಧಾರದ ಮೇಲೆ ಪ್ರತಿ ಟನ್ ಕಬ್ಬಿಗೆ 3,300 ರೂ. ರಾಜ್ಯ ಸರ್ಕಾರ ಘೋಷಣೆ ಮಾಡುತ್ತಿದ್ದಂತೆ ಒಂದೆಡೆ ವಿಜಯೋತ್ಸವ ಆಚರಿಸುತ್ತಿದ್ದರೆ, ಮತ್ತೊಂದೆಡೆ 3,500 ರೂ.‌ ದರವನ್ನೇ ನಿಗದಿಪಡಿಸುವಂತೆ ಹೋರಾಟ ಮುಂದುವರಿದಿದೆ. 

ಬೈಲಹೊಂಗಲ ಬಂದ್ ಮಾಡಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೈಲಹೊಂಗಲ ನಗರದಲ್ಲಿ ಶನಿವಾ ಬೆಳಗ್ಗೆಯಿಂದ ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟಿಸಲಾಗಿದೆ.

ಬೈಲಹೊಂಗಲಕ್ಕೆ ಬರುವ ಬಸ್​ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ರೈತರ ಹೋರಾಟಕ್ಕೆ ಕೈಜೋಡಿಸಿದ್ದಾರೆ. 

ನಗರದ ಚನ್ನಮ್ಮ ವೃತ್ತದಲ್ಲಿ ರಾಜಕೀಯ ನಾಯಕರು, ರೈತ ಮುಖಂಡರು ಕಳೆದ ಆರು ದಿನಗಳಿಂದ ಅಹೋರಾತ್ರಿ ಧರಣಿ ಕುಳಿತಿದ್ದಾರೆ. ಬೈಲಹೊಂಗಲ ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ.

ಒಂದು ಟನ್‌ ಕಬ್ಬಿಗೆ ಹಿಂದೆ ನಿಗದಿಯಾಗಿದ್ದ 3,200ರ ಜತೆಗೆ ಹೆಚ್ಚುವರಿಯಾಗಿ 50 ರೂ. ಹಾಗೂ ರಾಜ್ಯ ಸರ್ಕಾರವು ಒಂದು ಅವಧಿಯ ಪ್ರೋತ್ಸಾಹ ಧನವಾಗಿ 50 ಪಾವತಿಸಲಿದೆ. ಸಾಗಣೆ ಮತ್ತು ಕಟಾವು ವೆಚ್ಚ ಹೊರತುಪಡಿಸಿ ಶೇ 11.25 ಇಳುವರಿ ಪ್ರಮಾಣ ಇರುವ ಪ್ರತಿ ಟನ್‌ ಕಬ್ಬಿಗೆ 3,300 ಹಾಗೂ ಶೇ. 10.5 ಇಳುವರಿ ಪ್ರಮಾಣ ಇರುವ ಕಬ್ಬಿಗೆ ₹3,200 ದರ ಸಿಗಲಿದೆ.

Related Articles

Back to top button