*ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು; ಪತ್ರ ಬರೆದ ರಾಜು ಕಾಗೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವನ್ನಾಗಿಸಿ ಎಂದು ರಾಷ್ಟ್ರಪತಿ, ಪ್ರಧಾನಿ, ಸಿಎಂಗೆ ಶಾಸಕ ರಾಜು ಕಾಗೆ ಪತ್ರಬರೆದಿದ್ದಾರೆ
15 ಜಿಲ್ಲೆಗಳನ್ನೊಳಗೊಂಡ ಉತ್ತರ ಕರ್ನಾಟಕ ಪ್ರತ್ಯೇಕವಾಗಿಸಲು ಕೋರಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನ್ಯಾಯ ಆಗುತ್ತಿದ್ದು ಮಲತಾಯಿ ಧೋರಣೆ ತಾರತಮ್ಯ ತೋರಲಾಗುತ್ತಿದೆ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ. ಆ ಮೂಲಕ ಉತ್ತರ ಕರ್ನಾಟಕ ಹೋರಾಟ ಸಮಿತಿ ಹೋರಾಟಕ್ಕೆ ಶಾಸಕ ಕಾಗೆ ಬೆಂಬಲ ನೀಡಿದ್ದು, ಚಳಿಗಾಲದ ಅಧಿವೇಶನದಲ್ಲೂ ಈ ಬಗ್ಗೆ ಚರ್ಚಿಸುತ್ತೇನೆ ಎಂದಿದ್ದಾರೆ.
ಅಭಿವೃದ್ಧಿ ವಿಚಾರದಲ್ಲಿ ದಕ್ಷಿಣ ಕರ್ನಾಟಕ ಹೋಲಿಸಿದರೆ ಉತ್ತರ ಕರ್ನಾಟಕ ಹಿಂದುಳಿದಿದೆ. ದಕ್ಷಿಣಕ್ಕೆ ತೋರಿಸುವ ವಿಶೇಷ ಕಾಳಜಿ ಉತ್ತರಕ್ಕೆ ಯಾಕಿಲ್ಲ?. ಎಲ್ಲರೂ ಕನ್ನಡನಾಡಿನ ಮಕ್ಕಳೇ, ಆದರೂ ಯಾಕೆ ಮಲತಾಯಿ ಧೋರಣೆ, ತಾರತಮ್ಯ ಹೋಗಲಾಡಿಸಿ, ಇಲ್ಲವೇ ಪ್ರತ್ಯೇಕ ಉತ್ತರ ಕರ್ನಾಟಕ ರಚನೆ ಮಾಡುವಂತೆ ಈ ಭಾಗದ ಕೆಲ ಹೋರಾಟಗಾರರು ಆಗ್ರಹಿಸುತ್ತಿದ್ದಾರೆ.
ರಾಜು ಕಾಗೆ ಪತ್ರದ ಬೆನ್ನಲ್ಲೇ ಉತ್ತರ ಕರ್ನಾಟಕ ಹೋರಾಟ ಸಮಿತಿ, ಉತ್ತರ ಕರ್ನಾಟಕ ವಿಕಾಸ ವೇದಿಕೆಯಿಂದ ಮೂರು ಬೇಡಿಕೆಗಳಿಗೆ ಆಗ್ರಹ ವ್ಯಕ್ತವಾಗಿದೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಇವನ್ನು ಈಡೇರಿಸದಿದ್ದರೆ ಸುವರ್ಣ ವಿಧಾನಸೌಧದ ಮೇಲೆ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಎಚ್ಚರಿಕೆ ನೀಡಲಾಗಿದೆ.
ಪತ್ರದಲ್ಲಿ ಏನಿದೆ?
ಆಡಳಿತಾತ್ಮಕ ಅನುಕೂಲಕ್ಕಾಗಿ ಮತ್ತು ಸಮಗ್ರ ಅಭಿವೃದ್ಧಿಗಾಗಿ ಉತ್ತರ ಕರ್ನಾಟಕದ 15 ಜಿಲ್ಲೆಗಳಾದ ಬೀದರ, ಕಲಬುರಗಿ, ವಿಜಯಪುರ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಉತ್ತರಕನ್ನಡ, ಹಾವೇರಿ, ವಿಜಯನಗರ, ಬಳ್ಳಾರಿ, ದಾವಣಗೆರೆ ಇವುಗಳನ್ನು ಒಳಗೊಂಡ ಹೊಸ ರಾಜ್ಯ ರಚನೆಗೆ ನನ್ನ ಆಗ್ರಹವಿದೆ. ಕರ್ನಾಟಕ ಏಕೀಕರಣ ಆದಾಗಿನಿಂದ ಇಲ್ಲಿಯವರೆಗೂ ಎಲ್ಲ ಕ್ಷೇತ್ರಗಳಲ್ಲಿಯೂ ಈ ಭಾಗಕ್ಕೆ ನಿರಂತರವಾಗಿ ಅನ್ಯಾಯ, ತಾರತಮ್ಯ ಮಲತಾಯಿ ಧೋರಣೆ ಆಗುತ್ತಲೆ ಬಂದಿದೆ. ಪ್ರತ್ಯೇಕ ರಾಜ್ಯ ರಚನೆಯಿಂದ ಮತ್ತೊಂದು ಕನ್ನಡ ನಾಡು ನಿರ್ಮಾಣವಾಗುವುದು ನಮಗೆ ಹೆಮ್ಮೆಯ ವಿಷಯ.
ಉತ್ತರ ಕರ್ನಾಟಕವು ಸರ್ವ ಸಂಪನ್ಮೂಲಗಳನ್ನು ಹೊಂದಿರುವ ಸಮೃದ್ಧ ನಾಡಾಗಿದೆ. ಕನ್ನಡ ಭಾಷೆಯ ಉಳಿವಿಗೆ ಮತ್ತು ಕರ್ನಾಟಕ ಏಕೀಕರಣಕ್ಕೆ ವಿಶೇಷ ಕೊಡುಗೆಯನ್ನು ಕೊಟ್ಟ ನಾಡು ನಮ್ಮದು. ಉತ್ತರ ಕರ್ನಾಟಕ ಹೋರಾಟ ಸಮಿತಿ(ರಿ)ಯ ಜನಪ್ರತಿನಿಧಿ ಸಹಿ ಸಂಗ್ರಹಣಾ ಅಭಿಯಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.
ಈಗಾಗಲೇ, ಒಂದು ಕೋಟಿಗೂ ಅಧಿಕ ಜನರಿಂದ ಸಹಿಯೊಂದಿಗೆ ಲಿಖಿತ ಅಭಿಪ್ರಾಯವನ್ನು ಪಡೆದುಕೊಂಡಿದ್ದಾರೆ. ಮತ್ತು ರಾಜ್ಯಪಾಲರಿಗೆ ಮತ್ತು ರಾಷ್ಟ್ರಪತಿಯವರಿಗೆ ಭೇಟಿಯಾಗಿ ಮನವಿಪತ್ರ ಸಲ್ಲಿಸಿದ್ದಾರೆ. ಅದೇ ರೀತಿ ಪ್ರಧಾನಿಗಳಿಗೆ ಪತ್ರವನ್ನು ಬರೆದಿರುತ್ತಾರೆ. ಈ ಭಾಗದ ಎಲ್ಲ ವರ್ಗದ ಜನರು ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯವನ್ನು ಕೇಳುತ್ತಿದ್ದಾರೆ. ದಯವಿಟ್ಟು ತಾವು ನಮ್ಮ ಮನವಿಯನ್ನು ಪರಿಗಣಿಸಿ, ಕೇಂದ್ರ ಸರ್ಕಾರಕ್ಕೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ನಿರ್ಮಾಣಕ್ಕಾಗಿ ಸೂಕ್ತ ಶಿಫಾರಸು ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.



