
ಪ್ರಗತಿವಾಹಿನಿ ಸುದ್ದಿ: ಕ್ರಿಸ್ಮಸ್ ಹಾಗೂ ಹೊಸ ವರ್ಷ ಸನಿಹದಲ್ಲಿದೆ. ಈ ಎರುಡು ಹಬ್ಬಗಳ ಆಚರಣೆಗೆ ಗೋವಾಗೆ ಹೋಗುವವರೆ ಹೆಚ್ಚು. ಆದರೆ ನಿನ್ನೆ ತಡರಾತ್ರಿ ರಾತ್ರಿ 1 ಗಂಟೆ ಸುಮಾರಿಗೆ ಗೋವಾದ ನೈಟ್ ಕ್ಲಬ್ ಒಂದರಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿ ದುರಂತ ಸಂಭವಿಸಿದ್ದು, 23 ಮಂದಿ ಸಾವನ್ನಪ್ಪಿದ್ದಾರೆ.
ಈ ದುರಂತದಲ್ಲಿ ಸುಮಾರು 50 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಗೋವಾ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರು ಇನ್ನೂ ಹರಸಾಹಸ ಪಡುತ್ತಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಮೃತರ ಪೈಕಿ 3-4 ಮಂದಿ ಪ್ರವಾಸಿಗಳಾಗಿದ್ದು, ಮಿಕ್ಕವರೆಲ್ಲರೂ ಹೋಟೆಲ್ ನ ಸಿಬ್ಬಂದಿ ಎಂದು ತಿಳಿದುಬಂದಿದೆ.
ಕಿಚನ್ ನಲ್ಲಿ ಕಾಣಿಸಿಕೊಂಡ ಬೆಂಕಿ ಸಿಲಿಂಡರ್ ಗೆ ತಗುಲಿದ್ದೇ ಅನಾಹುತಕ್ಕೆ ಕಾರಣ ಎನ್ನಲಾಗಿದ್ದು ಕೆಲವೇ ಕ್ಷಣಗಳಲ್ಲಿ ಬೆಂಕಿಯು ಇಡೀ ಕಟ್ಟಡಕ್ಕೆ ವ್ಯಾಪಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿ ಅವಘಡ ನಡೆಯುವ ಮುನ್ನವೇ ಸಿಲಿಂಡರ್ ನಿಂದ ಅನಿಲ ಸೋರಿಕೆಯಾಗುತ್ತಿತ್ತು. ಹೀಗಾಗಿ ದುರ್ಘಟನೆಯ ಪರಿಣಾಮ ತೀವ್ರಗೊಂಡಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಸ್ಥಳಕ್ಕೆ ಗೋವಾ ಸಿಎಂ ಭೇಟಿ
ಗೋವಾದ ಸಿಎಂ ಪ್ರಮೋದ್ ಸಾವಂತ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಘಟನೆಯು ಸಂಪೂರ್ಣ ದುರದೃಷ್ಟಕರ. ಗೋವಾ ಒಂದು ಪ್ರವಾಸಿ ರಾಜ್ಯವಾಗಿದೆ. ಇಲ್ಲಿ ಕೆಲವು ಕಾರ್ಯಗಳನ್ನು ಅಕ್ರಮವಾಗಿ ನಡೆಸಲಾಗುತ್ತಿದೆ. ಅಂಥವರಿಂದ ಈ ದುರ್ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಮೋದ್ ಸಾವಂತ್ ಹೇಳಿದ್ದಾರೆ.



