
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ೪೦ ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳು ದಿನಾಂಕ : ೧೨-೨-೨೦೨೫ ರ ಪ್ರಕಾರ ಸರ್ಕಾರದ ಪಿಎಂ ಕುಸುಮ್ ಯೋಜನೆಯಡಿ ಸೌರ ಘಟಕವನ್ನು ಸ್ಥಾಪಿಸುವ ಸಲುವಾಗಿ ಇಂಧನ ಇಲಾಖೆಗೆ ಕಾಯ್ದಿರಿಸಿ ಆದೇಶ ನೀಡಿದ್ದಾರೆ.
ಈ ಜಮೀನು ಗಾಯರಾಣ ಜಮೀನು ಆಗಿದ್ದು ಸೌರ ಘಟಕ ಸ್ಥಾಪಿಸಲು ಪ್ರಸ್ತಾಪಿಸಿದ ಕ್ಷೇತ್ರದಲ್ಲಿನ ಗಿಡ ಮರಗಳನ್ನು ತೆರವುಗೊಳಿಸಲು ಅನುಮತಿ ನೀಡಲು ಹೆಸ್ಕಾಂ ಶಾಖಾಧಿಕಾರಿಗಳು ವಿನಂತಿಸಿಕೊಂಡಿದ್ದರು.
ಆದರೆ ಕ್ಷೇತ್ರದಲ್ಲಿನ ಗಿಡ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯಿಂದ ಅನುಮತಿಯನ್ನು ನೀಡಿಲ್ಲ. ಕ್ಷೇತ್ರದಲ್ಲಿ ಸುಮಾರು ೮ ಎಕರೆ ಪ್ರದೇಶದಲ್ಲಿ ಸಣ್ಣ ಶ್ರೀಗಂಧದ ಗಿಡಗಳು ಸೇರಿದಂತೆ ಕುರುಚಲು ಗಿಡಗಂಟಿಗಳನ್ನು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದೇ ಅನಧಿಕೃತವಾಗಿ ಕಟಾವಣೆ ಮಾಡಿದ್ದರಿಂದ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು. ಪ್ರಕರಣದಲ್ಲಿನ ತನಿಖೆಯನ್ನು ಶೀಘ್ರವೇ ಪೂರ್ಣಗೊಳಿಸಿ ಉಳಿದ ತಪ್ಪಿತಸ್ಥರ ವಿರುದ್ಧ ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬೆಳಗಾವಿ ವಿಭಾಗ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


