*ಡಾ.ಚಂದ್ರು ಲಮಾಣಿ ವಿರುದ್ಧ ದೊಡ್ಡ ಷಡ್ಯಂತ್ರ ಆಗಿದೆ: ರಮೇಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡಾ.ಚಂದ್ರು ಲಮಾಣಿ ವಿದ್ಯಾವಂತ ಆಗಿರುವ ಕಾರಣಕ್ಕೆ ಪಿತೂರಿ ಮಾಡಿ ಸಿಲುಕಿಸಿದ್ದಾರೆ. ಅದೇ ಸಮಾಜದ ವ್ಯಕ್ತಿಯನ್ನು ಬಳಸಿ ಪಿತೂರಿ ಮಾಡಲಾಗಿದೆ. ಷಡ್ಯಂತ್ರ ಮಾಡಿ ಜೈಲು ಪಾಲು ಮಾಡಿದ್ದಾರೆ. ಇದರ ವಿರುದ್ಧ ನಾನು ಒಬ್ಬ ಅಹಿಂದನಾಗಿ ಧ್ವನಿ ಎತ್ತುತ್ತಿದ್ದೇನೆ. ತಪ್ಪು ಮಾಡಿದರೆ ಶಿಕ್ಷೆ ಆಗಲಿ ಎಂದು ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಲಿತ ಶಾಸಕರನ್ನು 20 ವರ್ಷಗಳಿಂದ ತುಳಿಯವ ಕೆಲಸ ನಡೆದಿದೆ. ನಾವು ಧ್ವನಿ ಎತ್ತಲೇಬೇಕಾಗಿದೆ. ಲೋಕಾಯುಕ್ತರ ಬಗ್ಗೆ ನಾನು ಮಾತನಾಡಲ್ಲ. ಆದರೆ, ಶೇ.74ರಷ್ಟು ಮತದಾರರು ಇರುವ ಸಮಾಜವನ್ನು ಉಳಿಯುವ ಯತ್ನ ನಡೆದಿದೆ. ಅಹಿಂದ ಎಂದು ಹೇಳುವ ನಾವೆಲ್ಲಾ ಇದರ ವಿರುದ್ಧ ಹೋರಾಟ ಮಾಡಬೇಕಿದೆ ಎಂದರು.
ಭ್ರಷ್ಟಾಚಾರ ಬಗ್ಗೆ ಮಾತನಾಡಲ್ಲ. ಆದರೆ, ವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡುತ್ತೇವೆ. ದಲಿತ ಪರ ಸರ್ಕಾರ ಎನ್ನುವರು ಅಧಿಕಾರಿದಲ್ಲಿ ಇದ್ದಾಗಲೇ ಈ ರೀತಿ ಘಟನೆಗಳು ನಡೆಯುತ್ತಿವೆ. ವೈ.ಸಂಪಂಗಿಯನ್ನು ಇದೇ ರೀತಿ ಸಿಲುಕಿಸಿದರು. ಸಂಜೆ ನಿವೃತ್ತಿ ಆಗಬೇಕಿದ್ದ ಅಧಿಕಾರಿ ಮೇಲೆ ದಾಳಿ ಮಾಡಿದರು ಅಂತಾ ರಮೇಶ ಜಾರಕಿಹೊಳಿ ಆರೋಪಿಸಿದರು.
ಭ್ರಷ್ಟಾಚಾರ ಆರೋಪ ಬಂದಾಗ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡೋದು ಕಷ್ಟ. ದಲಿತ ಶಾಸಕರು, ಅಹಿಂದ ಶಾಸಕರು ಯಾಕೆ ಬಲೆಗೆ ಬೀಳುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಚಂದ್ರು ಲಮಾಣಿ ಭ್ರಷ್ಟಾಚಾರ ಬಗ್ಗೆ ನಾನು ಮಾತನಾಡಲ್ಲ. ಸ್ವಾಮೀಜಿಯೊಬ್ಬರು ದಲಿತ ವ್ಯಕ್ತಿಯನ್ನು ಬಳಸಿ ಕೃತ್ಯ ಎಸಗಿದ್ದಾರೆ. ನನ್ನ ಮೇಲೆ ಏನು ಮಾಡಿದ್ದಾರೆ ಗೊತ್ತು. ನಾನು ಒಬ್ಬ ಸಂತ್ರಸ್ತ ಈಗ ಕೋರ್ಟ್ ನಲ್ಲಿ ಇದೆ. ಅದರ ಬಗ್ಗೆ ನಾನೇನು ಹೇಳಲ್ಲ ಎಂದು ರಮೇಶ ಜಾರಕಿಹೊಳಿ ಅಸಮಾಧಾನ ಹೊರ ಹಾಕಿದರು.
ಬಿಜೆಪಿಯಲ್ಲಿ ಇರುವ ಗೊಂದಲವನ್ನು ಇತ್ಯರ್ಥ ಪಡಿಸಬೇಕು. ಇಲ್ಲವೇ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಹಾನಿಯಾಗಲಿದೆ. ಕಾಂಗ್ರೆಸ್ ನಲ್ಲಿರುವ ಗೊಂದಲ ಇತ್ಯರ್ಥ ಮಾಡಬೇಕು ಅಂತಾ ಸತೀಶ ಜಾರಕಿಹೊಳಿ ಹೇಳಿದ್ದಾರೆ. ನಾನು ಬಿಜೆಪಿಯಲ್ಲಿನ ಗೊಂದಲ ಇತ್ಯರ್ಥಕ್ಕೆ ಮನವಿ ಮಾಡುತ್ತೇನೆ.
ದಲಿತ ಶಾಸಕರ ಪರವಾಗಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡುತ್ತೇನೆ. ಸೂಕ್ತ ತನಿಖೆ ಮಾಡಬೇಕು ಅಂತಾ ಮನವಿ ಮಾಡುತ್ತೇವೆ. ಮೊದಲಿನ ರೀತಿಯಲ್ಲಿ ಸಿದ್ದರಾಮಯ್ಯ ಉಳಿದಿಲ್ಲ. ನಾನು ಅವರ ಸಂಪುಟದಲ್ಲಿ ಕೆಲಸ ಮಾಡಿದ್ದೇನೆ. ಆದರೆ, ಈ ಹಿಂದಿನ ಸಿದ್ದರಾಮಯ್ಯ ಉಳಿದಿಲ್ಲ. ಸಿದ್ದರಾಮಯ್ಯ ಕೇವಲ ಕುರುಬ ನಾಯಕ ಅಲ್ಲ. ಅಹಿಂದ ವರ್ಗದ ನಾಯಕ ಎಂಬುದು ನಮ್ಮ ಅಭಿಪ್ರಾಯ ಎಂದು ರಮೇಶ ಜಾರಕಿಹೊಳಿ ಹೇಳಿದರು.



