*ಹಾಸ್ಟೆಲ್ ನಲ್ಲಿ 9ನೇ ತರಗತಿ ವಿದ್ಯಾರ್ಥಿಯಿಂದ ಹಲ್ಲೆ: ಓರ್ವ ಬಾಲಕ ಸಾವು; 7 ಜನರ ಸ್ಥಿತಿ ಗಂಭೀರ*

ಪ್ರಗತಿವಾಹಿನಿ ಸುದ್ದಿ: ಕ್ಷುಲ್ಲಕ ಕಾರಣಕ್ಕೆ 9ನೇ ತರಗತಿ ವಿದ್ಯಾರ್ಥಿ ಹಾಸ್ಟೆಲ್ ವಾರ್ಡನ್, ಬಾಲಕರ ಮೇಲೆ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಓರ್ವ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಳ್ಳಾರಿಯ ಖಾಸಗಿ ಶಾಲೆಗೆ ಸೇರಿದ ಹಾಸ್ಟೆಲ್ನಲ್ಲಿ ಈ ಘಟನೆ ನಡೆದಿದೆ. 9ನೇ ತರಗತಿ ವಿದ್ಯಾರ್ಥಿ ರಾಡ್ನಿಂದ ಮನಬಂದಂತೆ ಹೊಡೆದಿದ್ದು, ಓರ್ವ ಬಾಅಲಕ ಮೃತಪಟ್ಟಿದ್ದಾನೆ. ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಲ್ಲೆ ಬಳಿಕ ಬಾಲಕ ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಡ್ನಿಂದ ಹೊಡೆದಿದ್ದಾನೆ ಎಂದು ಶಾಲಾ ಆಡಳಿತ ಮಂಡಳಿ ಹೇಳಿದೆ. ಆದರೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಹಲ್ಲೆ ನಡೆಸಿರುವ ವಿದ್ಯಾರ್ಥಿ ಡ್ರಗ್ ಅಡಿಕ್ಟ್ ಆಗಿರುವ ಶಂಕೆ ಇದ್ದು, ಇಷ್ಟೆಲ್ಲ ಹುಡುಗರ ಮೇಲೆ ಆತ ಒಬ್ಬನೇ ಹಲ್ಲೆ ಮಾಡೋದಕ್ಕೆ ಹೇಗೆ ಸಾಧ್ಯ? ಇದಕ್ಕೆಲ್ಲಾ ಶಾಲಾ ಆಡಳಿತ ಮಂಡಳಿಯೇ ನೇರ ಹೊಣೆ ಎಂದು ಮೃತ ವಿದ್ಯಾರ್ಥಿ ಪೋಷಕರು ಆರೋಪಿಸಿದ್ದಾರೆ.
ಈ ಹಿಂದೆ ಹಾಸ್ಟೆಲ್ನಲ್ಲಿ ಈ ರೀತಿಯ ಯಾವುದೇ ಘಟನೆ ನಡೆದಿರಲಿಲ್ಲ. ಹಲ್ಲೆ ನಡೆದಿರೋದು ಕೇವಲ ಒಬ್ಬರ ಮೇಲಲ್ಲ. ಹಲವರ ಮೇಲೆ ಬಾಲಕ ಹಲ್ಲೆ ನಡೆಸಿದ್ದಾನೆ. ಹೀಗಾಗಿ ಆತನಿಗೆ ಏನಾದರೂ ಮಾನಸಿಕ ಸಮಸ್ಯೆಗಳಿತ್ತಾ? ಅಥವಾ ಆತ ಮಾದಕ ವಸ್ತುಗಳಿಗೆ ಎಡಿಕ್ಟ್ ಆಗಿದ್ದನಾ? ಎನ್ನುವ ಬಗ್ಗೆಯೂಅನುಮಾನಗಳು ವ್ಯಕ್ತವಾಗಿವೆ. ಹಾಸ್ಟೆಲ್ ಆಡಳಿತ ಮಂಡಳಿ ನಂಬಿ ಮಕ್ಕಳನ್ನು ಬಿಟ್ಟಿದ್ದೇವೆ. ಆದರೆ ಅವರ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ. ಅಸಲಿಗೆ ಬಾಲಕರ ನಡುವೆ ಏನಾಗಿದೆ ಎನ್ನುವುದೇ ಗೊತ್ತಿಲ್ಲ ಎಂದು ಮೃತ ಬಾಲಕನ ಪೋಷಕರು ಕಣ್ಣೀರಿಟ್ಟಿದ್ದಾರೆ.




