

ರಘುನಾಥ ಡಿಪಿ
ಅಹ್ಮದಾಬಾದ್: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಭರ್ಜರಿ ನಿರ್ವಹಣೆ ತೋರಿದ ಭಾರತ ತಂಡ ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ 96 ರನ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಇದರೊಂದಿಗೆ ಸತತ 2ನೇ ಬಾರಿ ಟ್ರೋಫಿ ಜಯಿಸುವ ಮೂಲಕ ಚಾಂಪಿಯನ್‌ಪಟ್ಟ ಉಳಿಸಿಕೊಂಡ ಭಾರತ, ಒಟ್ಟಾರೆ 3ನೇ ಬಾರಿಗೆ ಚಾಂಪಿಯನ್‌ಪಟ್ಟ ಅಲಂಕರಿಸುವ ಮೂಲಕ ಹಲವು ದಾಖಲೆಗಳನ್ನು ಬರೆಯಿತು.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಸಂಜು ಸ್ಯಾಮ್ಸನ್ (89 ರನ್,46 ಎಸೆತ, 5 ಎಸೆತ, 8 ಸಿಕ್ಸರ್) ಹಾಗೂ ಅಭಿಷೇಕ್ ಶರ್ಮ (52 ರನ್, 21ಎಸೆತ, 6 ಬೌಂಡರಿ, 3 ಸಿಕ್ಸರ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ಫಲವಾಗಿ 5 ವಿಕೆಟ್‌ಗೆ 255 ರನ್‌ಗಳಿಸಿತು. ಪ್ರತಿಯಾಗಿ ಈ ಬೃಹತ್ ಮೊತ್ತ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಭಾರತ ತಂಡ 2023ರ ಏಕದಿನ ವಿಶ್ವಕಪ್‌ನಲ್ಲಿ ಇದೇ ಕ್ರೀಡಾಂಗಣದಲ್ಲಿ ಅನುಭವಿಸಿದ್ದ ಫೈನಲ್ ಸೋಲಿನ ಕಹಿಯನ್ನು ಮರೆಸಿತು.
* ಭಾರತಕ್ಕೆ ಹ್ಯಾಟ್ರಿಕ್ ಟ್ರೋಫಿ
ಭಾರತ ತಂಡ ಸತತ 3ನೇ ವರ್ಷ ಐಸಿಸಿ ಟ್ರೋಫಿ ಗೆದ್ದುಕೊಂಡಿತು. ಭಾರತ ತಂಡ 2024ರಲ್ಲಿ ಟಿ20 ವಿಶ್ವಕಪ್ ಜಯಿಸಿದ್ದರೆ, 2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದರೆ, ಇದೀಗ 2026ರಲ್ಲೂ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಸತತ 3ನೇ ವರ್ಷ ಐಸಿಸಿ ಟ್ರೋಫಿ ಗೆದ್ದುಕೊಂಡಿತು.
* ಕಿವೀಸ್‌ಗೆ ಬೂಮ್ರಾ-ಅಕ್ಷರ್ ಪಟೇಲ್ ಆಘಾತ
ಭಾರತ ತಂಡ ನೀಡಿದ ಬೃಹತ್ ಮೊತ್ತ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡಕ್ಕೆ ಸ್ಥಳೀಯ ಪ್ರತಿಭೆನಗಳಾದ ಜಸ್‌ಪ್ರೀತ್ ಬೂಮ್ರಾ ಹಾಗೂ ಅಕ್ಷರ್ ಪಟೇಲ್ ಶಾಕ್ ನೀಡಿದರು. ಆರಂಭಿಕ ಟಿಮ್ ಸೀಫರ್ಟ್ (52ರನ್, 26 ಎಸೆತ, 2 ಬೌಂಡರಿ, 5 ಸಿಕ್ಸರ್) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಭಾರತೀಯರ ದಾಳಿ ಎದುರು ಸಂಪೂರ್ಣ ಮಂಕಾದರು. ಈ ಜೋಡಿಯ ಮಾರಕ ದಾಳಿ ಫಲವಾಗಿ ಪಂದ್ಯ ಬಹುತೇಕ ಏಕಪಕ್ಷೀಯವಾಗಿ ಸಾಗಿತು.
* ಸ್ಯಾಮ್ಸನ್, ಅಭಿಷೇಕ್, ಇಶಾನ್ ಭರ್ಜರಿ ಬ್ಯಾಟಿಂಗ್
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕ ಜೋಡಿ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮ ಉತ್ತಮ ಆರಂಭ ನೀಡಿತು. ಟೂರ್ನಿಯುದ್ದಕ್ಕೂ ಫಾರ್ಮ್ ಕೊರತೆ ಎದುರಿಸುತ್ತಿದ್ದ ಅಭಿಷೇಕ್ ಶರ್ಮ ಕಡೆಗೂ ಸ್ಫೋಟಕ ಬ್ಯಾಟಿಂಗ್ ನಡೆಸುವಲ್ಲಿ ಯಶಸ್ವಿಯಾದರು. ಈ ಜೋಡಿ ಮೊದಲ ವಿಕೆಟ್‌ಗೆ ಎದುರಿಸಿದ ಕೇವಲ 43 ಎಸೆತಗಳಲ್ಲಿ 98 ರನ್ ಕಲೆಹಾಕಿ ಬೃಹತ್ ಮೊತ್ತಕ್ಕೆ ವೇದಿಕೆ ಸೃಷ್ಟಿಸಿತು. ಅಭಿಷೇಕ್ ಶರ್ಮ ನಿರ್ಗಮನದ ಬಳಿಕ ಸ್ಯಾಮ್ಸನ್ ಜೊತೆಯಾದ ಇಶಾನ್ ಕಿಶನ್ (54 ರನ್, 25 ಎಸೆತ, 4 ಬೌಂಡರಿ, 4 ಸಿಕ್ಸರ್) ಕೂಡ ನ್ಯೂಜಿಲೆಂಡ್ ಬೌಲರ್‌ಗಳನ್ನು ದಂಡಿಸಿದರು. 16ನೇ ಓವರ್ ಚಾಲ್ತಿಯಲ್ಲಿ ತಂಡದ ಮೊತ್ತವನ್ನು 200 ರನ್ ಗಡಿ ದಾಟಿಸಿದ ಈ ಜೋಡಿ ಒಂದೇ ಓವರ್‌ನಲ್ಲಿ ನಿರ್ಗಮಿಸಿತು. ಜೇಮ್ಸ್ ನಿಶಾನ್ ಒಂದೇ ಓವರ್‌ನಲ್ಲಿ ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಹಾಗು ನಾಯಕ ಸೂರ್ಯ ಕುಮಾರ್ ಯಾದವ್ ವಿಕೆಟ್ ಕಬಳಿಸಿದರು. ಕಡೆ ಹಂತದಲ್ಲಿ ಶಿವಂ ದುಬೆ (26ರನ್, 8 ಬೌಂಡರಿ, 3 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಪ್ರರ್ದಶಿಸಿ ತಂಡದ ಮೊತ್ತವನ್ನು 250 ರನ್ ಗಡಿ ದಾಟಿಸಿದರು.
ಸಂಕ್ಷೀಪ್ತ ಸ್ಕೋರ್: ಭಾರತ ತಂಡ : 20 ಓವರ್‌ಗಳಲ್ಲಿ 5 ವಿಕೆಟ್‌ಗೆ 255 ರನ್ (ಸಂಜು ಸ್ಯಾಮ್ಸನ್ 89, ಅಭಿಷೇಕ್ ಶರ್ಮ 52, ಇಶಾನ್ ಕಿಶನ್ 54 ರನ್, ಜೇಮ್ಸ್ ನೀಶಾಮ್ (46ಕ್ಕೆ 3), ನ್ಯೂಜಿಲೆಂಡ್: 19 ಓವರ್‌ಗಳಲ್ಲಿ 159 (ಟಿಮ್ ಸೀಫರ್ಟ್ 52, ಜಸ್‌ಪ್ರೀತ್ ಬೂಮ್ರಾ 15ಕ್ಕೆ 4, ಅಕ್ಷರ್ ಪಟೇಲ್ 27ಕ್ಕೆ 3).
ಲಘು ಲಾಠಿ ಪ್ರಹಾರ
ಬೆಳಗಾವಿಯಲ್ಲಿ ಸಂಭ್ರಮಾಚರಣೆ ವೇಳೆ ಲಘು ಲಾಠಿ ಪ್ರಹಾರ ನಡೆದಿದೆ.
ನಗರದ ಚನ್ನಮ್ಮ ವೃತ್ತ, ಆರ್ ಪಿಡಿ ವೃತ್ತ ಸೇರಿದಂತೆ ಹಲವೆಡೆ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ವೇಳೆ ಜನರನ್ಬು ಚದುರಿಸಲು ಲಘು ಲಾಠಿ ಪ್ರಹಾರ ನಡೆದಿದೆ.
ಟಿ-20 ವಿಶ್ವಕಪ್ ಫೈನಲ್ : 10,000 ಕೋಟಿ ರೂಪಾಯಿಗಳ ಅಕ್ರಮ ಬೆಟ್ಟಿಂಗ್ ಪ್ರಕರಣದ ಉನ್ನತ ಮಟ್ಟದ ತನಿಖೆ ನಡೆಸಿ ! – ‘ಸುರಾಜ್ಯ ಅಭಿಯಾನ’ ದಿಂದ ನಾಗ್ಪುರ ಮತ್ತು ಗೋವಾ ದೂರುಗಳಿಗೆ ಬೆಂಬಲ
ನಾಗ್ಪುರ / ಪಣಜಿ : ಇಂದು ಅಹಮದಾಬಾದ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿರುವ ಟಿ-20 ವಿಶ್ವಕಪ್ 2026 ರ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ, ದೇಶದಲ್ಲಿ 10,000 ಕೋಟಿ ರೂಪಾಯಿಗಳ ಬೃಹತ್ ಅಕ್ರಮ ಬೆಟ್ಟಿಂಗ್ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಹೈಟೆಕ್ ಆಪ್‌ಗಳು ಮತ್ತು ಆಫ್‌ಶೋರ್ ಸರ್ವರ್‌ಗಳ ಮೂಲಕ ಈ ಹಗರಣ ನಡೆಯುತ್ತಿದೆ. ಈ ಕುರಿತು ರಾಯಬಂದರ್ (ಪಣಜಿ) ನಿವಾಸಿ ಶ್ರೀ. ದಿಲೀಪ್ ಶೆಟ್ಯೆ ಅವರು ಪಣಜಿ ಪೊಲೀಸ್ ಕಮಿಷನರ್ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಲಿಖಿತ ದೂರು ನೀಡಿದ್ದಾರೆ.
ನಾಗ್ಪುರದಲ್ಲೂ ಜಾಗೃತ ನಾಗರಿಕರೊಬ್ಬರು ಇ-ಮೇಲ್ ಮೂಲಕ ದೂರು ದಾಖಲಿಸಿದ್ದಾರೆ. ಈ ದೂರುಗಳಿಗೆ ಹಿಂದೂ ಜನಜಾಗೃತಿ ಸಮಿತಿಯು ಪೂರ್ಣ ಬೆಂಬಲ ನೀಡಿದ್ದು, ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸುವಂತೆ ಒತ್ತಾಯಿಸಿದೆ.

ಕೆಲವು ಪ್ರಮುಖ ಪತ್ರಿಕೆಗಳಲ್ಲಿ ಈ ಬೆಟ್ಟಿಂಗ್ ಕುರಿತು ವರದಿಗಳು ಪ್ರಕಟವಾಗಿವೆ. ವಾಸ್ತವವಾಗಿ, ಆಡಳಿತ ಮತ್ತು ಪೊಲೀಸ್ ವ್ಯವಸ್ಥೆಯು ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣದ ಕ್ರಮ ಕೈಗೊಳ್ಳಬೇಕಿತ್ತು. ಇಷ್ಟು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಬೆಟ್ಟಿಂಗ್ ಭಾರತದ ಅಂತರಾಷ್ಟ್ರೀಯ ವರ್ಚಸ್ಸನ್ನು ಕುಗ್ಗಿಸುತ್ತಿದೆ ಮತ್ತು ಭಾರತೀಯ ಕ್ರಿಕೆಟ್‌ನ ವಿಶ್ವಾಸಾರ್ಹತೆಯನ್ನು ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ‘ಸುರಾಜ್ಯ ಅಭಿಯಾನ’ ಹೇಳಿದೆ. ಕ್ರೀಡೆಯ ಹೆಸರಿನಲ್ಲಿ ನಡೆಯುವ ಈ ಜೂಜು ಕೆಲವು ನಿರ್ದಿಷ್ಟ ವ್ಯಕ್ತಿಗಳ ನಿಯಂತ್ರಣದಲ್ಲಿದ್ದು, ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದು ಅಧಿಕಾರಿಗಳಿಗೂ ತಿಳಿದಿರುತ್ತದೆ ಎಂದು ಅಭಿಯಾನವು ಆರೋಪಿಸಿದೆ.
ಪ್ರಮುಖ ಬೇಡಿಕೆಗಳು :
ಮೂಲದ ತನಿಖೆ : 10,000 ಕೋಟಿ ರೂಪಾಯಿಗಳ ಈ ದಂಧೆಯ ಗಂಭೀರತೆಯನ್ನು ಗಮನಿಸಿ, ಪೊಲೀಸ್ ಆಡಳಿತವು ತಕ್ಷಣವೇ ಮಾಧ್ಯಮಗಳನ್ನು ಸಂಪರ್ಕಿಸಿ ಈ ಮಾಹಿತಿಯ ಮೂಲವನ್ನು ತನಿಖೆ ಮಾಡಬೇಕು ಮತ್ತು ಬೆಟ್ಟಿಂಗ್ ನಿಯಂತ್ರಣ ಕೊಠಡಿಗಳನ್ನು ಧ್ವಂಸಗೊಳಿಸಬೇಕು.
ಕಠಿಣ ಕಾನೂನು ಕ್ರಮ : ಕೇಂದ್ರ ಸರ್ಕಾರವು ಅನುಮೋದಿಸಿದ ‘ಆನ್‌ಲೈನ್ ಗೇಮಿಂಗ್ ಆಕ್ಟ್ 2025’ ಅಡಿಯಲ್ಲಿ ಇಂತಹ ಅಕ್ರಮ ಬೆಟ್ಟಿಂಗ್ ಅನ್ನು ಜಾಮೀನು ರಹಿತ ಅಪರಾಧವೆಂದು ಘೋಷಿಸಲಾಗಿದೆ; ಈ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು.
ಆರ್ಥಿಕ ತನಿಖೆ: ಜಾರಿ ನಿರ್ದೇಶನಾಲಯ (ED) ಮತ್ತು ಸೈಬರ್ ಸೆಲ್ ಈ ಹವಾಲಾ ಜಾಲ ಮತ್ತು ಡಿಜಿಟಲ್ ಪೇಮೆಂಟ್ ಗೇಟ್‌ವೇಗಳನ್ನು ತಕ್ಷಣವೇ ಬಂದ್ ಮಾಡಬೇಕು.
SIT ರಚನೆ: ಸ್ಥಳೀಯ ಬುಕ್ಕಿಗಳು ಮತ್ತು ಅಂತರಾಷ್ಟ್ರೀಯ ಸಿಂಡಿಕೇಟ್‌ಗಳ ನಡುವಿನ ಸಂಬಂಧವನ್ನು ತನಿಖೆ ಮಾಡಲು ರಾಜ್ಯ ಮಟ್ಟದಲ್ಲಿ ತಕ್ಷಣವೇ ವಿಶೇಷ ತನಿಖಾ ತಂಡವನ್ನು (SIT) ರಚಿಸುವುದು ಅತ್ಯಗತ್ಯ.
“ದೇಶ ಮತ್ತು ಕ್ರಿಕೆಟ್‌ನ ಅಂತರಾಷ್ಟ್ರೀಯ ಘನತೆಯನ್ನು ಕಾಪಾಡಲು, ಪಂದ್ಯ ಮುಗಿಯುವ ಮೊದಲೇ ಈ ಜಾಲದ ಮೇಲೆ ಆಂತರಿಕ ‘ಸರ್ಜಿಕಲ್ ಸ್ಟ್ರೈಕ್’ ನಡೆಸಬೇಕು.” ಎಂದು ‘ಸುರಾಜ್ಯ ಅಭಿಯಾನ’ ತಿಳಿಸಿದೆ.
ಆಡಳಿತದಲ್ಲಿ ಪಾರದರ್ಶಕತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ‘ಸುರಾಜ್ಯ ಅಭಿಯಾನ’ವು ಈ ಪ್ರಕರಣದ ಮೇಲೆ ನಿರಂತರ ನಿಗಾ ಇಡಲಿದೆ ಎಂದು ತಿಳಿಸಿದೆ.



