Kannada NewsKarnataka NewsLatest

*ಕ್ರಿಕೆಟ್ ಬೆಟ್ಟಿಂಗ್, ಪೊಲೀಸರ ಮೇಲೆ ಹಲ್ಲೆ ಯತ್ನ: ಐವರು ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಪ್ರಕರಣ ಹಾಗೂ ಪೊಲೀಸರ ಮೇಲೆ ದಾಳಿಗೆ ಯತ್ನ ಕೇಸ್ ನಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಶಿರ್ವದಲ್ಲಿ ಈ ಘಟನೆ ನಡೆದಿದೆ. ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಹಂಚಿಕಟ್ಟೆ ಸಮೀಪದ ಹೋಂಡಾ ಶೋರೂಮ್ ಬಳಿ ಪೊಲೀಸರ ಮೇಲೆ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದಾರೆ.

Home add -Advt

ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಪ್ರಸನ್ನ ಎಂ.ಎಸ್. ಮತ್ತು ಅವರ ತಂಡ ಬಂಗ್ಲೆಗುಡ್ಡೆ ವೃತ್ತದಿಂದ ಬರುತ್ತಿದ್ದ ಕಪ್ಪು ಕಾರನ್ನು ನಿಲ್ಲಿಸಲು ಪ್ರಯತ್ನಿಸಿದ್ದರು. ಆದರೆ ಕಾರಿನಲ್ಲಿದ್ದವರು ವಾಹನವನ್ನು ನಿಲ್ಲಿಸುವ ಬದಲು, ಪೊಲೀಸ್ ಸಿಬ್ಬಂದಿಯ ಮೇಲೆಯೇ ದಾಳಿ ಮಾಡಲು ಯತ್ನಿಸಿದ್ದಾರೆ. ಆರೋಪಿಗಳು ವಾಹನವನ್ನು ಪೊಲೀಸರ ಮೇಲೆ ಹರಿಸಲು ಪ್ರಯತ್ನಿಸಿ, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರ್ವ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಮಂಜುನಾಥ ಮರಬಾಡ ಅವರ ತಂಡಕ್ಕೆ ಅದೇ ಕಾರು ಸಂಶಯಾಸ್ಪದವಾಗಿ ಬೆಳ್ಮಣ್​ದಿಂದ ಬರುತ್ತಿರುವ ಮಾಹಿತಿ ಲಭ್ಯವಾಗಿತ್ತು. ವಾಹನವನ್ನು ತಡೆದಾಗ ಚಾಲಕ ಮೊದಲು ವೇಗ ಕಡಿಮೆ ಮಾಡಿದರೂ, ಬಳಿಕ ಪೊಲೀಸ್ ಅಧಿಕಾರಿಯನ್ನು ತಳ್ಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎಂದು ಹೇಳಲಾಗಿದೆ. ನಂತರ ಶಿರ್ವ ಪಟ್ಟಣದಲ್ಲಿ ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ನಾಡೂರು ನಿವಾಸಿ ಸುಧರ್ಷನ್ ಶೆಟ್ಟಿ (29), ಹೆರೂರು ನಿವಾಸಿ ಕಾರ್ತವ್ಯ ಶೆಟ್ಟಿ (27), ಮೂಡೂರು ನಿವಾಸಿ ಅರುಣ್ ಶೆಟ್ಟಿ (29), ಹೆಬ್ರಿಯ ಬೆಲಂಜೆ ನಿವಾಸಿ ತೇಜಸ್ (28) ಮತ್ತು ಬೈಂದೂರು ತಾಲೂಕಿನ ಶಿರೂರು ನಿವಾಸಿ ಪ್ರಜ್ವಲ್ ಶೆಟ್ಟಿ (29) ಎಂದು ಗುರುತಿಸಲಾಗಿದೆ. ತನಿಖೆ ವೇಳೆ ಆರೋಪಿಗಳು ಸಂಘಟಿತ ಕ್ರಿಕೆಟ್ ಬೆಟ್ಟಿಂಗ್ ಜಾಲದಲ್ಲಿ ತೊಡಗಿದ್ದರೆಂದು ಪತ್ತೆಯಾಗಿದೆ.

Related Articles

Back to top button