*ಮಾಜಿ ಸಚಿವ ಬಿ.ಸಿ. ನಾಗೇಶ ನಿಧನ* *ಗಣ್ಯರ ಸಂತಾಪ*

*ಮಾಜಿ ಸಚಿವ ಬಿ.ಸಿ. ನಾಗೇಶ ನಿಧನ*
*ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:*
ಮಾಜಿ ಶಿಕ್ಷಣ ಸಚಿವ ಹಾಗೂ ತಿಪಟೂರು ಕ್ಷೇತ್ರದ ಮಾಜಿ ಶಾಸಕರಾದ ಬಿ.ಸಿ.ನಾಗೇಶ್ (67) ಅವರು ಅನಾರೋಗ್ಯದಿಂದ ಮಂಗಳವಾರ ರಾತ್ರಿ ಬೆಂಗಳೂರಿನ ತಮ್ಮ ಪುತ್ರಿಯ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
*ಬಿ ಸಿ ನಾಗೇಶ್ ನಿಧನಕ್ಕೆ ಸಿಎಂ ಡಿ ಕೆ ಶಿವಕುಮಾರ್ ಸಂತಾಪ*
ಮಾಜಿ ಶಾಸಕ, ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ನಿಧನಕ್ಕೆ ಸಿಎಂ ಡಿ ಕೆ ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
“ಸರಳತೆಯಿಂದ ನಾಗೇಶ್ ಅವರು ಎಲ್ಲರ ಆಪ್ತರಾಗಿದ್ದರು. ನೇರ ನಡೆ- ನುಡಿಗೆ ಹೆಸರಾಗಿದ್ದರು. ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ಜನರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು. ಶಾಸಕರಾಗಿ ಹಾಗೂ ಶಿಕ್ಷಣ ಸಚಿವರಾಗಿ ಅವರು ಸಲ್ಲಿಸಿದ ಸೇವೆ ಸ್ಮರಣೀಯ.
ಶಿಕ್ಷಣ ಕ್ಷೇತ್ರದ ಸುಧಾರಣೆ ಮತ್ತು ವಿದ್ಯಾರ್ಥಿಗಳ ಹಿತದ ಬಗ್ಗೆ ಅವರು ವಿಶೇಷ ಕಾಳಜಿ ಹೊಂದಿದ್ದರು. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಸೌಹಾರ್ದಯುತ ಸಂಬಂಧ ಕಾಪಾಡಿಕೊಂಡಿದ್ದರು.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ದುಃಖತಪ್ತ ಕುಟುಂಬದ ಸದಸ್ಯರಿಗೆ, ಬಂಧುಬಳಗಕ್ಕೆ ಹಾಗೂ ಅಪಾರ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ಮತ್ತು ಧೈರ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
*ಸ್ನೇಹಮಯಿ ಬಿ.ಸಿ.ನಾಗೇಶ್ ಅಗಲಿಕೆಗೆ ಸಚಿವ ಪ್ರಲ್ಹಾದ ಜೋಶಿ ಕಂಬನಿ*
ನವದೆಹಲಿ: ಸರಳ-ಸಜ್ಜನ, ಸ್ನೇಹಮಯಿ ಆಗಿದ್ದ ಮಾಜಿ ಶಿಕ್ಷಣ ಸಚಿವ, ತಿಪಟೂರು ಮಾಜಿ ಶಾಸಕ ಬಿ.ಸಿ.ನಾಗೇಶ್ ಅವರ ನಿಧನಕ್ಕೆ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಕಂಬನಿ ಮಿಡಿದಿದ್ದಾರೆ.
ಸರಳ-ಸಜ್ಜನಿಕೆ ವ್ಯಕ್ತಿತ್ವದವರಾಗಿದ್ದ ನಾಗೇಶ ಅವರು ವೈಚಾರಿಕ ಬದ್ಧತೆ ಹಾಗೂ ಜನಪರ ಕಾಳಜಿಗೆ ಹೆಸರಾಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಅವರು ತಂದ ಹಲವು ಸುಧಾರಣೆಗಳು ಮತ್ತು ಸಂಘಟನಾ ಕೌಶಲ್ಯ ಸದಾ ಸ್ಮರಣೀಯ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಪೂರ್ಣಾವಧಿ ಕಾರ್ಯಕರ್ತರಾಗಿ ಸಾರ್ವಜನಿಕ ಜೀವನ ಆರಂಭಿಸಿ, ಶಾಸಕರಾಗಿ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ಅನನ್ಯ ಸೇವೆ ಸಲ್ಲಿಸಿದ್ದರೆಂದು ಜೋಶಿ ಸ್ಮರಿಸಿದ್ದಾರೆ.
ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಹಾಗೂ ತಿಪಟೂರು-ತುಮಕೂರು ಭಾಗದ ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಣೀಯ. ಬಿಜೆಪಿ ಪಕ್ಷ ಸಂಘಟನೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಬಿ.ಸಿ.ನಾಗೇಶ ಅವರ ಅಗಲಿಕೆಯಿಂದ ಶಿಕ್ಷಣ ಕ್ಚೇತ್ರಕ್ಕೆ, ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.
ಸರಳತೆ, ಸೌಜನ್ಯಕ್ಕೆ ಹೆಸರಾಗಿದ್ದ ನಾಗೇಶ್ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ದುಃಖಿತ ಕುಟುಂಬಕ್ಕೆ, ಅಭಿಮಾನಿಗಳಿಗೆ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲೆಂದು ಸಚಿವ ಪ್ರಲ್ಹಾದ ಜೋಶಿ ಪ್ರಾರ್ಥಿಸಿದ್ದಾರೆ.
*ಬಿ.ಸಿ. ನಾಗೇಶ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ*
*ಸರಳ ಸಜ್ಜನಿಕೆಯ ವ್ಯಕ್ತಿ ಬಿ.ಸಿ.ನಾಗೇಶ್ : ಬಸವರಾಜ ಬೊಮ್ಮಾಯಿ*
ಬೆಂಗಳೂರು: ನನ್ನ ಆತ್ಮೀಯ ಸ್ನೇಹಿತರಾಗಿದ್ದ, ಸರಳ ಸಜ್ಜನಿಕೆಯ ವ್ಯಕ್ತಿತ್ವದ, ಮಾಜಿ ಶಾಸಕರೂ ಹಾಗೂ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿಕ್ಷಣ ಸಚಿವರಾಗಿ ಅತ್ಯಂತ ಸಮರ್ಥವಾಗಿ ಸೇವೆ ಸಲ್ಲಿಸಿದ್ದ ತಿಪಟೂರಿನ ಬಿ.ಸಿ. ನಾಗೇಶ್ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖಿತನಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ತಿಪಟೂರು ಮತ್ತು ತುಮಕೂರು ಭಾಗದ ಜನರ ಸೇವೆಗೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ. ಪಕ್ಷದ ಸಂಘಟನೆಯನ್ನು ಬಲಪಡಿಸುವಲ್ಲಿಯೂ ಅವರು ಅಪಾರ ಶ್ರಮ ವಹಿಸಿದ್ದರು. ಅವರ ಅಗಲಿಕೆಯಿಂದ ಬಿಜೆಪಿ ಪಕ್ಷಕ್ಕೆ ಮಾತ್ರವಲ್ಲದೆ, ತುಮಕೂರು ಭಾಗದ ಜನತೆ ಹಾಗೂ ಅವರ ಅಪಾರ ಅಭಿಮಾನಿ ಬಳಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಸರಳತೆ, ಸೌಜನ್ಯ ಹಾಗೂ ಆತ್ಮೀಯತೆಯಿಂದ ಎಲ್ಲರ ಮನಗೆದ್ದಿದ್ದ ನಾಗೇಶ್ ಅವರೊಂದಿಗಿನ ಒಡನಾಟ ಮತ್ತು ಅವರ ಸಜ್ಜನಿಕೆಯ ವ್ಯಕ್ತಿತ್ವ ಸದಾ ನನ್ನ ಸ್ಮರಣೆಯಲ್ಲಿ ಉಳಿಯಲಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ದುಃಖತಪ್ತ ಕುಟುಂಬದ ಸದಸ್ಯರಿಗೆ, ಬಂಧುಬಳಗಕ್ಕೆ ಹಾಗೂ ಅಪಾರ ಅಭಿಮಾನಿಗಳಿಗೆ ಈ ಅಪಾರ ನೋವನ್ನು ಭರಿಸುವ ಶಕ್ತಿ ಮತ್ತು ಧೈರ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪದಲ್ಲಿ ತಿಳಿಸಿದ್ದಾರೆ.
*ಕುಮಾರಸ್ವಾಮಿ ಸಂತಾಪ*
ಮಾಜಿ ಮಂತ್ರಿಗಳು, ತಿಪಟೂರು ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕರು, ಸರಳರು ಮತ್ತು ಸಜ್ಜನಿಕೆಯ ವ್ಯಕ್ತಿತ್ವದ ಜನಾನುರಾಗಿ ಶ್ರೀ ಬಿ.ಸಿ.ನಾಗೇಶ್ ಅವರು ನಿಧನರಾದರೆಂಬ ಸುದ್ದಿ ತಿಳಿದು ಅತೀವ ನೋವುಂಟಾಯಿತು. ಪ್ರಾಥಮಿಕ ಶಿಕ್ಷಣ ಸಚಿವರಾಗಿ ಅನೇಕ ಉತ್ತಮ ಕೆಲಸಗಳನ್ನು ಮಾಡಿರುವ ಅವರ ಅಗಲಿಕೆ ನಾಡಿಗೆ ಬಹುದೊಡ್ಡ ನಷ್ಟ. ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಈ ದುಃಖವನ್ನು ಭರಿಸುವ ಶಕ್ತಿ ಚೈತನ್ಯವನ್ನು ದುಃಖತಪ್ತ ಕುಟುಂಬಕ್ಕೆ, ಅಭಿಮಾನಿಗಳಿಗೆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.



