Election NewsKannada NewsKarnataka NewsPolitics

*ಗ್ಯಾರಂಟಿ ಯೋಜನೆಗಳಿಗೆ SC/ST ಹಣ ಬಳಸುತ್ತಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಗೆಲುವು ಖಚಿತ

ಪ್ರಗತಿವಾಹಿನಿ ಸುದ್ದಿ: ಹರಿಹರ : ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಹಣವನ್ನು ಬಳಸಿಕೊಂಡಿಲ್ಲ. ಈ ಕುರಿತು ಸುಖಾ ಸುಮ್ಮನೆ ಆರೋಪಿಸುತ್ತಿರುವ ಬಿಜೆಪಿಯವರು, ಈ ಸಮುದಾಯಗಳಿಗೆ ನೀಡಿರುವ ಕೊಡುಗೆ ಏನು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದರು.

ಹರಿಹರದ ಹಳೇ ಹರ್ಲಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಗ್ಯಾರಂಟಿ ಯೋಜನೆಗಳನ್ನು ವಿರೋಧ ಪಕ್ಷದವರು ಅನಾವಶ್ಯಕವಾಗಿ ಟೀಕಿಸುತ್ತಿದ್ದಾರೆ ಎಂದರು.‌

ಸಮರ್ಥ್ ಗೆಲುವು ಶತಸಿದ್ಧ
ಶಾಮನೂರು ಶಿವಶಂಕರಪ್ಪನವರು ನಿಧನರಾದ ಬಳಿಕ ಅವರ ಕುಟುಂಬಸ್ಥರಿಗೆ ಟಿಕೆಟ್ ನೀಡಬೇಕು ಎಂದು ಪಕ್ಷ ತೀರ್ಮಾನಿಸಿತು. ಸಮರ್ಥ್ ಶಾಮನೂರು ಅವರ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಜಯಗಳಿಸುವುದು ಗ್ಯಾರಂಟಿ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

Home add -Advt

ಗ್ಯಾರಂಟಿ ಯೋಜನೆಗಳನ್ನು ಜನ ಸಾಮಾನ್ಯರ ಅನುಕೂಲಕ್ಕಾಗಿ ಮಾಡಿದ್ದೆ ಹೊರತು, ಚುನಾವಣೆಗಳಲ್ಲಿ ಗೆಲ್ಲುವುದಕ್ಕಾಗಿ ಮಾಡಿಲ್ಲ. 2023ರ ಚುನಾವಣೆಗೂ ಮುನ್ನ ಘೋಷಿಸಿದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಪೂರ್ಣ ಪ್ರಮಾಣದಲ್ಲಿ ಜಾರಿ ಆಗಿರುವುದರಿಂದ ಚುನಾವಣೆಗೆ ಸಹಾಯ ಆಗಬಹುದು ಎಂದರು.

ಕರ್ನಾಟಕದಲ್ಲಿ 70 ಸಾವಿರ ಅಂಗನವಾಡಿಗಳಿದ್ದು, 50 ಸಾವಿರ ಕೇಂದ್ರಗಳು ಸ್ವಂತ ಕಟ್ಟಡ ಹೊಂದಿವೆ. ಈಗಾಗಲೇ ಮೂರು ಸಾವಿರ ಕಟ್ಟಡವನ್ನು ಕಟ್ಟಲು ಕ್ರಮಕೈಗೊಳ್ಳಲಾಗಿದೆ. ಐಸಿಡಿಎಸ್ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತಲಾ 50:50 ನೀಡುತ್ತಿವೆ. ಕೇಂದ್ರ ಸರ್ಕಾರ ಕೂಡ ಅಂಗನವಾಡಿ ಕಾರ್ಯಕರ್ತರ ಬಗ್ಗೆ ಗಮನಹರಿಸಬೇಕು ಎಂದರು.

ಮೂರು ತಿಂಗಳ ಗರ್ಭಿಣಿಯಿಂದ ಹಿಡಿದು 6 ವರ್ಷದ ಮಗುವಿನ ತನಕ ಕರ್ನಾಟಕ ಸರ್ಕಾರ ಜವಾಬ್ದಾರಿ ತೆಗೆದುಕೊಂಡಿದೆ. ಈ ಮೊದಲು ನಮ್ಮ ಇಲಾಖೆ ಕಡೆಯ ಸ್ಥಾನದಲ್ಲಿ ಇರುತ್ತಿತ್ತು, ಈಗ ಮೊದಲ ಐದು ಸ್ಥಾನದಲ್ಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ‌

ನಾಲ್ಕು ಗೋಡೆ ಮಧ್ಯೆ ತೀರ್ಮಾನ
ಪಂಚಮಸಾಲಿ ಸಮಾಜದ ಪೀಠ ಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಮಾಜದ ಬಗ್ಗೆ ಮುಖಂಡರು ನಾಲ್ಕು ಗೋಡೆ ಮಧ್ಯೆ ಕುಳಿತು ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಲ್.ಬಿ.ಹನುಮಂತಪ್ಪ, ಕೆಂಗನಹಳ್ಳಿ ಹರೀಶ್,‌‌ ಹನಗವಾಡಿ ಉಮೇಶ್,‌ ಚಂದ್ರಪ್ಪ, ಎಂ.ಡಿ.ನಾಗಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Related Articles

Back to top button