*ಜಾತ್ರೆ ನೋಡುತ್ತಿದ್ದಾಗ ದುರಂತ: ಸಂಬಂಧಿಕರಿಗೆ ಮದುವೆ ಆಮಂತ್ರಣ ನೀಡಲು ಬಂದಿದ್ದ ಯುವಕ ಟ್ರ್ಯಾಕ್ಟರ್ ಹರಿದು ಸಾವು*

ಪ್ರಗತಿವಾಹಿನಿ ಸುದ್ದಿ: ಪಲ್ಲಕ್ಕಿ ಹೊತ್ತ ಟ್ರ್ಯಾಕ್ಟರ್ ಹರಿದ ಪರಿಣಾಮ ಹಸೆಮಣೆ ಏರಬೇಕಿದ್ದ ಯುವಕ ದಾರುಣವಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹುಳಿಮಾವು ಜಾತ್ರೆಯಲ್ಲಿ ನಡೆದಿದೆ.
ಬೆಂಗಳೂರಿನ ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ನಡೆದಿದ್ದು, ರಥೋತ್ಸವ ಹಿನ್ನಲೆ ರಾತ್ರಿ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪಲ್ಲಕ್ಕಿಗಳನ್ನ ನೋಡುತ್ತಾ ನಿಂತಿದ್ದ ಯುವಕನ ಮೇಲೆ ಟ್ರ್ಯಾಕ್ಟರ್ ಹರಿದಿದ್ದು, ಯುವಕ ಸ್ಥಳದಲೇ ಸಾವನ್ನಪ್ಪಿದ್ದಾರೆ.
ಅಕ್ಷತ್ (27) ಮೃತ ಯುವಕ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗಿತ್ತಾದರೂ ಮಾರ್ಗ ಮಧ್ಯೆಯೇ ಉಸಿರು ಚೆಲ್ಲಿದ್ದಾರೆ.
ಬನಶಂಕರಿ ನಿವಾಸಿಯಾಗಿರುವ ಅಕ್ಷತ್, ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಮದುವೆಯ ಅಹ್ವಾನ ಪತ್ರಿಕೆ ವಿತರಿಸಲೆಂದು ಬಂದಿದ್ದರು. ಹಾಗೆ ಜಾತ್ರೆಯನ್ನೂ ನೋಡಿ ಹೋಗೊಣ ಎಂದು ಅಲ್ಲಿಯೇ ಉಳಿದುಕೊಂಡಿದ್ದರು ಎನ್ನಲಾಗಿದೆ. ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆಯಿಂದಲೇ ಅಪಘಾತ ನಡೆದಿದೆ ಎನ್ನಲಾಗಿದೆ. ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಹುಳಿಮಾವು ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದ್ದು, ಸ್ಥಳಕ್ಕೆ ಬೆಂಗಳೂರು ದಕ್ಷಿಣ ಸಂಚಾರ ಡಿಸಿಪಿ ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




