
ಪ್ರಗತಿವಾಹಿನಿ ಸುದ್ದಿ: ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಬಹು ಅಂಗಾಂಗ ವೈಫಲ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 92 ಅವರ್ಷ ವಯಸ್ಸಾಗಿತ್ತು.
ಆಶಾ ಭೋಸ್ಲೆ ಅವರಿಗೆ ನಿನ್ನೆ ಹೃದಯಾಘಾತ ಸಂಭವಿಸಿತ್ತು. ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಆಶಾ ಭೋಸ್ಲೆ ಚಿಕಿತ್ಸೆಗೆ ಸ್ಪಂದಿಸದೇ ಇಂದು ಮಧ್ಯಾಹ್ನದ ವೇಳೆಗೆ ನಿಧನ ಹೊಂದಿದ್ದಾರೆ ಎಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯ, ಡಾ ಪ್ರತೀಕ್ ಸಂಧಾನಿ ಅವರು ಮಾಹಿತಿ ನೀಡಿದ್ದಾರೆ. ಆಶಾ ಭೋಸ್ಲೆ ಅವರು ಬಹು ಅಂಗಾಂಗ ವೈಫಲ್ಯದಿಂದ ನಿಧನ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಆಶಾ ಭೋಸ್ಲೆ ಭಾರತ ರತ್ನ ಪುರಸ್ಕೃತ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಸಹೋದರಿ. ಹಿಂದಿ, ಮರಾಠಿ, ಕನ್ನಡ, ತಮಿಳು, ತೆಲಗು, ಮಲಯಾಳಂ, ಅಸ್ಸಾಮಿ, ಭೋಜ್ ಪುರಿ, ಬೆಂಗಾಲಿ, ನೇಪಾಳಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿದ್ದಾರೆ.
ಆಶಾಅ ಭೋಸ್ಲೆ ಅವರ ನಿಧನಕ್ಕೆ ಇಡೀ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ.
ಆಶಾ ಭೋಂಸ್ಲೆಯವರು ಬಾಂಬೆ ಪ್ರಾಂತ್ಯದ ಸಾಂಗ್ಲಿಯಲ್ಲಿನ ಗೋರ್ ಎಂಬ ಒಂದು ಚಿಕ್ಕ ಹಳ್ಳಿಯಲ್ಲಿ, ಮಾಸ್ಟರ್ ದೀನಾನಾಥ್ ಮಂಗೇಶ್ಕರ್ ಎಂಬ ಸಂಗೀತ ಕುಟುಂಬದಲ್ಲಿ ಜನಿಸಿದರು. ಅವರ ತಂದೆಯವರು ರಂಗಭೂಮಿಯ ಕಲಾವಿದರು ಮತ್ತು ಶಾಸ್ತ್ರೀಯ ಗಾಯಕರಾಗಿದ್ದರು. ಅವರು ಒಂಬತ್ತು ವರ್ಷ ವಯಸ್ಸಿನವರಾಗಿದ್ದಾಗ ಅವರ ತಂದೆಯವರು ಮರಣ ಹೊಂದಿದರು. ಅವರ ಕುಟುಂಬವು ಪೂನಾ ದಿಂದ ಕೊಲ್ಹಾಪೂರ್‌ಗೆ ಮತ್ತು ಅಲ್ಲಿಂದ ಮುಂಬಯಿಗೆ ತೆರಳಿತು. ಅವರು ಮತ್ತು ಅವರ ಸಹೋದರಿ ಲತಾ ಮಂಗೇಶ್ಕರ್ ತಮ್ಮ ಕುಟುಂಬದ ನೆರವಿಗಾಗಿ ಹಾಡುವುದನ್ನು ಮತ್ತು ಚಲನಚಿತ್ರಗಳಲ್ಲಿ ನಟಿಸುವುದನ್ನು ಪ್ರಾರಂಭಿಸಿದ್ದರು.
ಅವರು ಮಝಾ ಬಲ್ (೧೯೪೩) ಎಂಬ ಮರಾಠಿ ಚಿತ್ರಕ್ಕಾಗಿ ತಮ್ಮ ಮೊದಲ ಚಲನಚಿತ್ರ ಗೀತೆ ಚಲಾ ಚಲಾ ನವ್ ಬಲಾ ವನ್ನು ಹಾಡಿದರು. ಈ ಚಿತ್ರಕ್ಕಾಗಿ ಸಂಗೀತ ರಚನೆಯನ್ನು ದತ್ತ ದವ್ಜೇಕರ್‌ರವರು ಮಾಡಿದ್ದರು. ಹಂಸ್ರಾಜ್ ಬೆಲ್ಹ್‌ರ ಚುನಾರಿಯಾ (೧೯೪೮) ಚಿತ್ರಕ್ಕಾಗಿ ಸಾವನ್ ಆಯಾ ಗೀತೆಯನ್ನು ಹಾಡುವುದರ ಮೂಲಕ ಅವರು ಹಿಂದಿ ಚಲನಚಿತ್ರಗೀತೆಗಳನ್ನು ಹಾಡಲು ಪ್ರಾರಂಭಿಸಿದ್ದರು. ಅವರ ಮೊದಲ ಹಿಂದಿ ಸೋಲೋ ಹಾಡನ್ನು ರಾತ್ ಕಿ ರಾಣಿ (೧೯೪೯) ಚಿತ್ರಕ್ಕಾಗಿ ಹಾಡಿದರು. ಅವರ ೧೬ನೆಯ ವಯಸ್ಸಿನಲ್ಲಿ. ಹೀಗೆ ಅವರ ಗಾಯನ ಪಯಣ ಆರಂಭವಾಯಿತು. ಆರು ವರ್ಷಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ಖ್ಯಾತ ಗಾಯಕಿಯಾಗಿ ಮಿಂಚಿದರು.




