Kannada NewsLatestNational

*ಪ್ರಪಾತಕ್ಕೆ ಉರುಳಿ ಬಿದ್ದ ಪ್ರವಾಸಿ ವ್ಯಾನ್: ಶಿಕ್ಷಕಿಯರು ಸೇರಿ 9 ಜನರು ಸಾವು*

ಪ್ರಗತಿವಾಹಿನಿ ಸುದ್ದಿ: ಪ್ರವಾಸಿ ವ್ಯಾನ್ ಪ್ರಪಾತಕ್ಕೆ ಬಿದ್ದ ಪರಿಣಾಮ ಒಂಭತ್ತು ಮಂದಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ತಮಿಳುನಾಡಿನ ವಾಲ್ಪಾರೈ-ಪೊಳ್ಳಾಚಿ ಘಾಟ್ ರಸ್ತೆಯ ಹೇರ್ ಪಿನ್ ಬೆಂಡ್‌ನಲ್ಲಿ ಈ ದುರಂತ ಸಂಭವಿಸಿದೆ. ಮೃತರಲ್ಲಿ ಐವರು ಸರ್ಕಾರಿ ಶಾಲಾ ಶಿಕ್ಷಕಿಯರಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಪ್ರವಾಸಿಗರು ಪ್ರಯಾಣಿಸುತ್ತಿದ್ದ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಹತ್ತಾರು ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಮೃತಪಟ್ಟವರಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಪಾಂಗು ಎಂಬಲ್ಲಿನ ಸರ್ಕಾರಿ ಎಲ್‌ಪಿ ಶಾಲೆಯ ಐವರು ಶಿಕ್ಷಕಿಯರು ಸೇರಿದ್ದಾರೆ.

ಮೃತರನ್ನು ಅಜಿತಾ (54), ರಮ್ಲಾ (52), ಸುಹ್ರಾ (43), ಆಶಾ (41), ಮಜೀತ್ (43), ಸಜಿತಾ (45), ಶಕೀಲಾ (37), ರುಕಿಯಾ (39) ಮತ್ತು ಹಿಶಾಂ (12) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಚಾಲಕ ಸೇರಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೇರಳದ ಪೆರಿಂತಲ್ಮಣ ಮೂಲದ 13 ಸದಸ್ಯರ ತಂಡ ವಾಲ್ಪಾರೈ ಪ್ರವಾಸ ಮುಗಿಸಿ ವಾಪಸಾಗುತ್ತಿತ್ತು. ಚಾಲಕ ಸೇರಿದಂತೆ 13 ಮಂದಿ ಈ ಪ್ರವಾಸಿಗರ ಗುಂಪಿನ ಭಾಗವಾಗಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ, ಭಾರಿ ತಿರುವಿನಲ್ಲಿ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾನೆ. 13ನೇ ಹೇರ್ ಪಿನ್ ಬೆಂಡ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ವಾಹನವು ರಸ್ತೆಯಿಂದ ಕೆಳಕ್ಕೆ ಜಾರಿ 9ನೇ ಹೇರ್ ಪಿನ್ ಬೆಂಡ್ ವರೆಗೆ ಉರುಳಿದೆ. ಕಡಿದಾದ ಭೂಪ್ರದೇಶ ಮತ್ತು ದಟ್ಟ ಅರಣ್ಯದ ಕಾರಣದಿಂದ ರಕ್ಷಣಾ ಕಾರ್ಯಾಚರಣೆ ಅತ್ಯಂತ ಸವಾಲಿನದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button