Kannada NewsKarnataka NewsLatest

*ಗೃಹಲಕ್ಷ್ಮೀ ಯೋಜನೆ ಹಣದಿಂದ ಐಸ್ ಕ್ರೀಂ ಅಂಗಡಿ ತೆರೆದು ಸ್ವಾವಲಂಭಿ ಬದುಕು ಕಟ್ಟಿಕೊಂಡ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆ ಹಣದಿಂದ ಹಲವಾರು ಮಹಿಳೆಯರು ಸಣ್ಣ ಉದ್ಯಮ, ವಾಪಾರಗಳನ್ನು ಆರಂಭಿಸಿ ಜೀವನಾಧಾರ ಮಾಡಿಕೊಂಡಿದ್ದಾರೆ. ಅದೇ ರೀತಿ ಇಲ್ಲೋರ್ವ ಮಹಿಳೆ ಗೃಹಲಕ್ಷ್ಮೀ ಹಣ ಕೂಡಿಟ್ಟು ಐಸ್ ಕ್ರೀಂ ಅಂಗಡಿ ತೆರೆದು ಸ್ವಾವಲಂಭಿ ಬದುಕು ಕಟ್ಟಿಕೊಂಡಿದ್ದಾರೆ.

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಹರಾಳು ಗ್ರಾಮದಲ್ಲಿ ಮಹಿಳೆ ಎನ್.ವಿಶಾಲಾಕ್ಷಿ ಐಸ್‌ಕ್ರೀಮ್ ಅಂಗಡಿ ತೆರೆದು, ಜೀವನ ರೂಪಿಸಿಕೊಂಡಿದ್ದಾರೆ.

ಮಧ್ಯಮ ವರ್ಗದ ಕುಟುಂಬದ ವಿಶಾಲಾಕ್ಷಿ ನಿತ್ಯ ಕೂಲಿ ಕೆಲಸ ಮಾಡುತ್ತಿದ್ದರು. ಆದರೆ, ಪ್ರತಿ ತಿಂಗಳು 2,000 ರೂ.ನಂತೆ ಬರುವ ಗೃಹಲಕ್ಷ್ಮೀ ಹಣ ಕೂಡಿಟ್ಟು ಐಸ್‌ಕ್ರೀಂ ಅಂಗಡಿ ಓಪನ್ ಮಾಡಿದ್ದಾರೆ. ಕೊಟ್ಟೂರಿನ ಕಿಶನ್ ಎಂಟರ್ಪ್ರೈಸ್ ವಿತರಕರಿಂದ ಚಾಕೋಬಾರ್, ಐಸ್‌ ಕ್ಯಾಂಡಿ, ಕುಲ್ಫಿ ಐಸ್, ಕೋನ್ ಐಸ್, ಕಪ್ ಐಸ್ ಇನ್ನಿತರೆ ಎಲ್ಲಾ ತರಹದ ಐಸ್‌ಕ್ರೀಮ್ ಉತ್ಪನ್ನಗಳನ್ನು ನೇರವಾಗಿ ಪಡೆದು ಮಾರಾಟ ಮಾಡುತ್ತಿದ್ದಾರೆ. ಹೊಸದಾಗಿ ಅಂಗಡಿ ಆರಂಭಿಸಿರುವ ವಿಶಾಲಾಕ್ಷಿಯ ಅಂಗಡಿಗೆ ಗ್ರಾಹಕರು ಸಂತೋಷದಿಂದ ಆಗಮಿಸುತ್ತಿದ್ದು, ಐಸ್‌ಕ್ರೀಂ ಖರೀದಿ ಮಾಡ್ತಿದ್ದಾರೆ.

ಬೇಸಿಗೆ ಅಬ್ಬರ ರಣ ಬಿಸಿಲ ಹೊಡೆತಕ್ಕೆ ಜಿಲ್ಲೆಯಲ್ಲಿ ಜನರು ಹೈರಾಣಾಗಿದ್ದಾರೆ. ಬಿಸಿಲಿನಿಂದ ಕಂಗೆಟ್ಟ ಜನರಿಗೆ ವಿಶಾಅಲಾಕ್ಷಿ ಅವರ ಐಸ್ ಕ್ರೀಂ ಅಂಗಡಿ ಆಯಾಸವನ್ನು ನೀಗಿಸುತ್ತಿದೆ. ಐಸ್‌ಕ್ರೀಂ ಜೊತೆಗೆ ವಿಶಾಅಲಾಕ್ಷಿ ತಂಪುಪಾನೀಯಗಳನ್ನು ಕೂಡ ಇಟ್ಟಿದ್ದಾರೆ. ಇದರಿಂದಾಗಿ ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಎಲ್ಲರೂ ಖರೀದಿಗೆ ಮುಂದಾಗುತ್ತಿದ್ದಾರೆ.

ಇದುವರೆಗೂ ಬಿಡುಗಡೆಯಾದ ಕಂತುಗಳ ಹಣವನ್ನು ಬ್ಯಾಂಕ್ ಖಾತೆಯಲ್ಲೇ ಉಳಿಸಿದ್ದ ವಿಶಾಲಾಕ್ಷಿ ಅವರು ತಮ್ಮ ಪತಿ ಎನ್.ಬಸವರಾಜ ಅವರ ಸಹಕಾರದೊಂದಿಗೆ ಈ ಉದ್ಯಮವನ್ನು ಆರಂಭಿಸಿರುವುದಾಗಿ ಹೇಳಿಕೊಂಡಿದ್ದಾರೆ. ಗೃಹ ಲಕ್ಷ್ಮೀ ಯೋಜನೆ, ಉಚಿತ ಯೋಜನೆಗಳು ನಮ್ಮ ಬದುಕಿಗೆ ವರದಾನವಾಗಿದೆ. ಯೋಜನೆ ಜಾರಿಗೆ ತಂದವರ ಹೊಟ್ಟೆ ನೂರಾರು ಕಾಲ ತಣ್ಣಗಿರಲಿ ಎಂದ ಕೃತಜ್ಞತೆ ಸಲ್ಲಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button