
ಪ್ರಗತಿವಾಹಿನಿ ಸುದ್ದಿ: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ಮೃತನನ್ನು ಆಂಧ್ರ ಮೂಲದ ವಿಶ್ವನಾಥ್(28) ಎಂದು ಗುರುತಿಸಲಾಗಿದೆ. ತಲೆಯಿಲ್ಲದ ದೇಹ ಮಾತ್ರ ನಿನ್ನೆ ಪತ್ತೆಯಾಗಿತ್ತು. ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿದ್ದ ರೈಲ್ವೇ ಪೊಲೀಸರು ಘಟನೆ ಸಂಬಂಧ ಯುಡಿಆರ್ ದಾಖಲಿಸಿಕೊಂಡಿದ್ದರು. ಆದರೆ ಇಂದು ರುಂಡವೂ ಪತ್ತೆಯಾಗಿದ್ದು, ಘಟನೆಯ ಬಗ್ಗೆ ಪೊಲೀಸರಿಗೆ ಸ್ಪಷ್ಟತೆ ಸಿಕ್ಕಿದೆ.
ರೈಲಿಗೆ ತಲೆಕೊಟ್ಟು ವಿಶ್ವನಾಥ್ ಆತ್ಮಹತ್ಯೆಯ ವೇಳೆ ರುಂಡ ಮತ್ತು ದೇಹ ಎರಡೂ ಬೇರೆ ಬೇರೆ ಆಗಿತ್ತು. 400 ಮೀಟರ್ನಷ್ಟು ದೂರಕ್ಕೆ ತಲೆಯನ್ನು ನಾಯಿಗಳು ಎಳೆದು ತಂದಿದ್ದು, ಇಂದು ಮೈದಾನದಲ್ಲಿ ಅದನ್ನು ಸ್ಥಳೀಯರು ಗಮನಿಸಿದ್ದಾರೆ. ಕೂಡಲೇ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಅಸಲಿ ವಿಚಾರ ಗೊತ್ತಾಗಿದೆ. ಸಿಕ್ಕಿರುವ ರುಂಡವನ್ನು ವರ್ತೂರು ಪೊಲೀಸರು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ.
ಇನ್ನು ಆತ್ಮಹತ್ಯೆಗೂ ಮುನ್ನ ಗರ್ಲ್ಫ್ರೆಂಡ್ಗೆ ವಿಶ್ವನಾಥ್ ಕರೆ ಮಾಡಿದ್ದರು ಎಂಬ ವಿಚಾರವೂ ತನಿಖೆ ವೇಳೆ ಗೊತ್ತಾಗಿದೆ. ಪ್ರೇಯಸಿ ಜೊತೆ ಮಾತನಾಡಿದ ಬಳಿಕವೇ ಅವರು ಚಲಿಸುತ್ತಿರುವ ರೈಲಿಗೆ ತಲೆ ಕೊಟ್ಟಿದ್ದಾರೆ ಎಂಬುದು ತಿಳಿದುಬಂದಿದೆ. ಘಟನೆ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




