*ಸರ್ವಮಾನತೆಗಾಗಿ ಬಸವಣ್ಣನವರ ಕೊಡುಗೆ ಮನುಕುಲಕ್ಕೆ ಮಾದರಿ: ಡಾ.ಪ್ರಭಾಕರ ಕೋರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿ ವರ್ಗ ಲಿಂಗ ಅಸಮಾನತೆಗಳನ್ನು ಕಿತ್ತುಹಾಕಲು 12ನೇ ಶತಮಾನದಲ್ಲಿ ಹೋರಾಡಿದ ಬಸವಣ್ಣವರ ಕ್ರಾಂತಿ ಮನುಕುಲಕ್ಕೆ ಉತ್ತಮ ನಿರ್ದೇಶನವಾಗಿದೆ. ಇಂದಿಗೂ ಇಂತಹ ಅಸಮಾನತೆ ವಿರುದ್ಧ ಸಮಾಜ ಬಸವಲಿಯುತ್ತಿರುವ ಸಂದರ್ಭದಲ್ಲಿ ಬಸವಣ್ಣವರು ಮಾಡಿದ ಹೋರಾಟ ನೆನಪಾಗುತ್ತದೆ ಎಂದು ಕೆಎಲ್ಇ ಸಂಸ್ಥೆಯ ಗೌರವ ಕಾರ್ಯಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ ಹೇಳಿದರು.
ಅವರು ಹನುಮಾನ ನಗರದಲ್ಲಿ ಹಮ್ಮಿಕೊಂಡಿದ್ದ ಶಿವಬಸವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಬಸವಣ್ಣನವರು ಮಹಾ ಮಾನವತಾವಾದಿಯಾಗಿದ್ದರು. ಬಸವಣ್ಣ ಸಾಮಾಜಿಕ ಸ್ತರವಿನ್ಯಾಸವನ್ನು ಕಿತ್ತು ಹಾಕಲು 900 ವರ್ಷಗಳ ಹಿಂದೆ ಹೋರಾಡಿದ್ದರು ಎಂದರೆ ಆಶ್ಚರ್ಯವೆನಿಸುತ್ತದೆ. ಇಂದಿಗೂ ಕೂಡ ಸಾಮಾಜಿಕ ಅಸಮಾನತೆಯನ್ನು ಕಿತ್ತುಹಾಕಲು ಸಾಧ್ಯವಾಗುತ್ತಿಲ್ಲ. ಅನುಭವ ಮಂಟಪ ವೆಂಬ ಪಾರ್ಲಿಮೆಂಟಿನಲ್ಲಿ ಮಹಿಳಾ ಸಮಾನತೆಯನ್ನು ನೀಡಿದ ಪ್ರಥಮ ನಾಯಕ ಬಸವಣ್ಣ. ಸಮಾಜದ ಎಲ್ಲ ವರ್ಗದವರನ್ನು ಇವ ನಮ್ಮವ ಇವ ನಮ್ಮವ ಎಂದವರು ಕಾಯಕ ದಾಸೋಹವನ್ನು ಅನುಷ್ಠಾನಕ್ಕೆ ತಂದರು. ದುಡಿಯುವ ಸಂಸ್ಕೃತಿಯನ್ನು ತಿಳಿಸಿದ್ದರೆ ಅದು ಬಸವಣ್ಣ. ವ್ಯಕ್ತಿಯಿಂದ ಸಮಾಜ ಕಲ್ಯಾಣವಾಗಬೇಕು ಎಂಬ ಅವರ ವಿಚಾರಗಳು ಇಂದಿಗೂ ಪ್ರಸ್ತುತವೆನಿಸಿದೆ. ಮಾನವೀಯತೆ ಅವರ ಸಂದೇಶಗಳು ಸಮಾಜಕ್ಕೆ ಸೋಪಾನವಾಗಿವೆ. ಅಂತೆ ರಾಷ್ಟ್ರಧರ್ಮವನ್ನು ಕಾಪಾಡಿದ ಶಿವಾಜಿ ಮಹಾರಾಜರ ಕೊಡುಗೆ ಮರೆಯುವಂತೆ ಇಲ್ಲ. ಇಂತಹ ಮಹಾತ್ಮರ ಜೀವನವನ್ನು ನಮ್ಮ ಯುವ ಜನಾಂಗಕ್ಕೆ ತಿಳಿಸಿ ಕೊಡುವ ಅವಶ್ಯಕತೆ ಇದೆ. ವಿಚಾರಗಳನ್ನು ನಮ್ಮ ಬದುಕಿಗೆ ಅಳವಡಿಸಿಕೊಂಡರೆ ನಾವು ಅವರಿಗೆ ಸಲ್ಲಿಸುವ ಮಹಾ ಗೌರವ ಎಂದು ಹೇಳಿದರು.
ಬೆಳಗಾವಿಯ ಉತ್ತರ ಶಾಸಕರಾದ ರಾಜು ಶೇಟ್ ಅವರು ಮಾತನಾಡಿ ಮಹಾತ್ಮ ಬಸವೇಶ್ವರ ಹಾಗೂ ಶಿವಾಜಿ ಮಹಾರಾಜರು ಈ ಸಮಾಜಕ್ಕೆ ನೀಡಿದ ಸೇವೆ ಅಗಾಧವಾದದ್ದು ಇಂಥ ಪುಣ್ಯಪುರುಷರ ದಾರಿಯಲ್ಲಿ ನಮ್ಮ ಜನಾಂಗ ಸಾಗಿದ್ದೆ ಆದರೆ ಸಮಾಜ ಪರಿವರ್ತನೆ ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎ ಬಿ ಪಾಟೀಲ್ ಅವರು ಮಾತನಾಡುತ್ತಾ ಬಸವಣ್ಣನಂತ ದರ್ಶನಿಕ ಇಲ್ಲದೆ ಹೋಗಿದ್ದರೆ ಸಮಾಜದಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿರಲಿಲ್ಲ. ಸಮಾಜ ಧಾರ್ಮಿಕವಾದ ಅವರ ಕ್ರಾಂತಿ ಮನು ಕುಲದ ಏಳಿಗೆಗೆ ಅತ್ಯಂತ ಮಹತ್ವವಾಗಿತ್ತು. ಅವರ ಪಥದಲ್ಲಿ ಸಾಗುವ ಮನಸ್ಸನ್ನು ರೂಪಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಉಪ ಮಹಾಪೌರರಾದ ಮಹಾಂತೇಶ್ ಕೊಂಗಾಳಿಯವರು ಮಾತನಾಡಿ ಬಸವಣ್ಣನವರು ಒಂದು ಜಾತಿ ಧರ್ಮ ಪಂತಕ್ಕೆ ಮಾತ್ರ ಸೀಮಿತಗೊಳ್ಳದೆ ವಿಶ್ವ ಮಾನವರಾಗಿ ಸಮಾಜವನ್ನು ಬೆಳಗಿದವರು ಅವರನ್ನ ನಾವೆಲ್ಲರೂ ಸದಾ ಸ್ಮರಿಸಬೇಕು ಅವರ ಮಾರ್ಗದಲ್ಲಿ ಸಾಗಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಸರ್ಜು ಕಾಟ್ಕರ್, ಡಾ ಎ ಬಿ ಘಾಟ್ಗೆ, ಡಾ. ಮಹೇಶ್ ಗುರನಗೌಡರ್ ಬಸವಣ್ಣವರು ಹಾಗೂ ಶಿವಾಜಿ ಮಹಾರಾಜರ ಕುರಿತು ಉಪನ್ಯಾಸವನ್ನು ನೀಡಿದರು.
ಈ ಸಂದರ್ಭದಲ್ಲಿ ಸಭಾ ಅಧ್ಯಕ್ಷರಾದ ಮುರುಗೇಶ್ ಡಪಲಾಪುರ್, ಪ್ರಶಾಂತ್ ರಾಂಪುರೆ, ಪ್ರಾಚಾರ್ಯ ಬಿಎಸ್ ಗವಿಮಠ್, ನಗರಸೇವಕ ಸಂದೀಪ್ ಜೀರಿಗೆಹಾಳ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕೆಎಲ್ಇ ಆಸ್ಪತ್ರೆಯ ರಕ್ತಭಂಡಾರದ ಮುಖ್ಯಸ್ಥರಾದ ಶ್ರೀಕಾಂತ್ ವಿರ್ಗಿ, ವಿಟಿಯು ಕುಲ ಸಚಿವರಾದ ಡಾ ಪ್ರಸಾದ್ ರಾಂಪುರ ವಿಶೇಷ ಸಾಧನೆಗಾಗಿ ಸತ್ಕರಿಸಲಾಯಿತು. ಶ್ರೀಕಾಂತ್ ಶಾನವಾಡ ನಿರೂಪಿಸಿದರು. ರಾಜೇಂದ್ರ ಚಿಟಗಿ ವಂದಿಸಿದರು.


