Belagavi NewsBelgaum NewsEducationKarnataka News

*ಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ ಅದ್ವಿತೀಯ: ಅಮಿತ ಕೋರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶತಮಾನದ ಚರಿತ್ರೆಯನ್ನು ಹೊಂದಿರುವ ಕೆಎಲ್‌ಇ ಸಂಸ್ಥೆಯು ಇಂದು ಶಿಕ್ಷಣ-ಆರೋಗ್ಯ-ಸಂಶೋಧನಾ ಕ್ಷೇತ್ರದಲ್ಲಿ ಅಗಾಧವಾದ ಕೊಡುಗೆಯನ್ನು ಸಲ್ಲಿಸಿದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಅಮಿತ ಕೋರೆ ತಿಳಿಸಿದರು.  

ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಸಭಾಗೃಹದಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಪಿಯು ದ್ವಿತೀಯ ವರ್ಷದಲ್ಲಿ ಕೆಎಲ್‌ಇ ವಿದ್ಯಾರ್ಥಿಗಳ ಸಾಧನೆಯನ್ನು ಕುರಿತು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಅಮಿತ ಕೋರೆ ಮಾತನಾಡಿದರು.  

ಶಿಕ್ಷಣದ ಮೂಲಕ ಸಮಾಜವನ್ನು ಪರಿವರ್ತಿಸುವ ಸಂಕಲ್ಪದೊಂದಿಗೆ ಏಳು ಜನ ಸಪ್ತರ್ಷಿಗಳ ನಿಸ್ವಾರ್ಥತ್ಯಾಗದಿಂದ ಸ್ಥಾಪನೆಗೊಂಡಂತಹದು ಕೆಎಲ್‌ಇ ಸಂಸ್ಥೆ. ಇಂದು 318 ಅಂಗಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಸಂಸ್ಥೆಯಲ್ಲಿ 1.48 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದಾರೆ. 

ಶಿಕ್ಷಣದ ಎಲ್ಲ ಅಗತ್ಯತೆಗಳನ್ನು ಪೂರೈಸಿರುವ ಸಂಸ್ಥೆಯು ಗುಣಾತ್ಮಕವಾದ ಶಿಕ್ಷಣವನ್ನು ನೀಡುವುದರೊಂದಿಗೆ ಗ್ರಾಮೀಣ ಭಾಗದ ರೈತರ, ಕೂಲಿ ಕಾರ್ಮಿಕರ, ಮಧ್ಯವರ್ಗದವರ ಹಾಗೂ ಗಡಿಭಾಗದ ಅಸಂಖ್ಯ ವಿದ್ಯಾರ್ಥಿಗಳಿಗೆ ಸರ್ವೋನ್ನತವಾದ ಶಿಕ್ಷಣವನ್ನು ನೀಡುವ ಮೂಲಕ ಅವರ ಬದುಕಿಗೆಗೆ ಬೆಳಕಾಗಿದೆ. ಶಿಶು ವಿಹಾರದಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣದ ವರೆಗೆ ಹಾಗೂ ಸಮುದಾಯ ಆರೋಗ್ಯ ಸೇವೆಯ ಮೂಲಕ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಎಲ್‌ಇ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ʼಕೆಎಲ್‌ಇ ಬ್ರ್ಯಾಂಡ್‌ನೇಮ್‌ʼ ಜಾಗತಿಕ ನೆಲೆಯಲ್ಲಿ ದಾಖಲಿಸಿದೆ. 

Home add -Advt

ಇವುಗಳಲ್ಲಿ ಕೆಎಲ್‌ಇ ಪಿಯುಸಿ ಕಾಲೇಜುಗಳ ಕೊಡುಗೆ ಸಿಂಹಪಾಲು. ಕಲಾ-ವಾಣಿಜ್ಯ-ವಿಜ್ಞಾನ ಈ ಮೂರು ವಿಭಾಗಗಳಲ್ಲಿ 37 ಪಿಯು ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಬೆಳಗಾವಿ, ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಚಿಕ್ಕೋಡಿ, ಗೋಕಾಕ, ಖಾನಾಪುರ, ಬೈಲಹೊಂಗಲ, ಸವದತ್ತಿ, ರಾಯಬಾಗ, ಶಿರಗುಪ್ಪಿ, ಧಾರವಾಡ-ಹುಬ್ಬಳ್ಳಿ, ನಾಗರಭಾವಿ, ಬೆಂಗಳೂರು, ಗದಗ, ಹಾವೇರಿ, ರಾಣೇಬೆನ್ನೂರ, ಸಂಶಿ, ಗಂಗಾವತಿ, ಕುಕನೂರ, ಹಾನಗಲ್‌, ಅಂಕೋಲಾ, ಮಹಾಲಿಂಗಪೂರ ಹೀಗೆ ರಾಜ್ಯದ ಬಹುತೇಕ ನೆಲೆಗಳಲ್ಲಿ ವ್ಯಾಪಿಸಿಕೊಂಡಿರುವ ಕೆಎಲ್‌ಇ ಪಿಯು ಕಾಲೇಜುಗಳು ಗ್ರಾಮೀಣ ಹಾಗೂ ಗಡಿಭಾಗದಲ್ಲಿ ಹೆಚ್ಚು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಕೆಎಲ್‌ಇ ಸಂಸ್ಥೆಯು ಇನ್ನೂ ಹೆಚ್ಚಿನ ವಸತಿಸಹಿತ ಕಾಲೇಜುಗಳನ್ನು ಪ್ರಾರಂಭಿಸಲಿದೆ ಎಂದು  ಹೇಳಿದರು. 

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಮಾಜಿ ಸರ್ಕಾರಿ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಅವರು ಮಾತನಾಡಿ, ಎಲ್ಲ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳ ಪಿಯುಸಿ ಕಾಲೇಜುಗಳಲ್ಲಿ ಅತ್ಯುತ್ತಮವಾದ ತರಬೇತಿಯನ್ನು ನೀಡಲಾಗುತ್ತಿದೆ. ಗ್ರಾಮೀಣ ಭಾಗದ ದೂರದ ಮಹಾನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಹೋಗಿ ಓದುವುದು ಕಷ್ಟವಾದ ಕಾರಣ ಕಳೆದ ಒಂದು ದಶಕಕ್ಕೂ ಹೆಚ್ಚು ವರ್ಷಗಳಿಂದ NEET, JEE, CET, CA, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನುರಿತ ಶಿಕ್ಷಕರಿಂದ ನೀಡಲಾಗುತ್ತಿದೆ. ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಒಂದೇ ಕ್ಯಾಂಪಸ್‌ನ ಸೂರಿನಡಿಯಲ್ಲಿ ವಿಶೇಷವಾದ ತರಬೇತಿಯನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು. 

ಕೆಎಲ್‌ಇ ಸಂಸ್ಥೆಯು ಕ್ರೀಡಾಪಟುಗಳಿಗೆ ಉತ್ತಮವಾದ ತರಬೇತಿಯನ್ನು ನೀಡುತ್ತಿದ್ದು, ಖೇಲೋ ಇಂಡಿಯಾದಲ್ಲಿ ಕೆಎಲ್‌ಇ ವಿದ್ಯಾರ್ಥಿಗಳು ಸಾಧನೆ ಗೈದಿದ್ದು, ಮುಂಬರುವ ದಿನಗಳಲ್ಲಿ ಓಲಂಪಿಕನಲ್ಲಿ ಅರ್ಹತೆ  ಪಡೆಯುವ ನಿಟ್ಟಿನಲ್ಲಿ ಸುಸಜ್ಜಿತ ಹಾಗೂ ಅತ್ಯಾಧುನಿಕ ಕ್ರೀಡಾ ಸಲಕರಣೆಗಳ ಜೊತೆಗೆ ತರಬೇತಿ  ನೀಡಲಾಗುತ್ತಿದೆ ಎಂದು ತಿಳಿಸಿದರು. 

ಇದೇ ಸುಸಂದರ್ಭದಲ್ಲಿ ರಾಜ್ಯಮಟ್ಟದಲ್ಲಿ ಪಿಯು ರ‍್ಯಾಂಕ್‌ ಪಡೆದ ಕೆಎಲ್‌ಇ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. 

ದಾಖಲಾರ್ಹ ಫಲಿತಾಂಶ

ಪ್ರತಿವರ್ಷ ಕೆಎಲ್‌ಇ ಪಿಯು ಕಾಲೇಜುಗಳ ಫಲಿತಾಂಶದಲ್ಲಿ ದಾಖಲಾರ್ಹ ಬದಲಾವಣೆಯಾಗಿರುವುದು ಅವಲೋಕಿಸಬಹುದು. ರಾಜ್ಯಮಟ್ಟದಲ್ಲಿ ಕೆಎಲ್‌ಇ ವಿದ್ಯಾರ್ಥಿಗಳು ರ‍್ಯಾಂಕ್‌  ಪಡೆಯುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಪ್ರಸಕ್ತ 2025-26ನೇ ಸಾಲಿನಲ್ಲಿ 11,516 ವಿದ್ಯಾರ್ಥಿಗಳಲ್ಲಿ 11,047 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟಾರೆ 95.93% ಫಲಿತಾಂಶವನ್ನು ಸಂಸ್ಥೆಗೆ ತಂದುಕೊಟ್ಟಿದ್ದಾರೆ. ಕಲಾ ವಿಭಾಗದಲ್ಲಿ 91.29%, ವಾಣಿಜ್ಯ ವಿಭಾಗದಲ್ಲಿ 96.62% ಹಾಗೂ ವಿಜ್ಞಾನ ವಿಭಾಗದಲ್ಲಿ 96.83% ಫಲಿತಾಂಶ ಬಂದಿದೆ.   

ಪ್ರಸಕ್ತ ಸಾಲಿನಲ್ಲಿಯೇ ರಾಜ್ಯಮಟ್ಟದಲ್ಲಿ 27 ರ‍್ಯಾಂಕ್‌ಗಳು ಕೆಎಲ್‌ಇ ಸಂಸ್ಥೆಯ ಪಾಲಾಗಿವೆ. ಕಲಾ ವಿಭಾಗದಲ್ಲಿ 3ನೇ, 7ನೇ, 10ನೇ ರ‍್ಯಾಂಕ್‌ಗಳನ್ನು ಒಟ್ಟು 5 ವಿದ್ಯಾರ್ಥಿಗಳು ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 4ನೇ, 5ನೇ, 6ನೇ, 7ನೇ, 8ನೇ, 9ನೇ ಹಾಗೂ 10ನೇ ರ‍್ಯಾಂಕ್‌ಗಳನ್ನು ಒಟ್ಟು 13 ವಿದ್ಯಾರ್ಥಿಗಳು ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 4ನೇ, 7ನೇ, 8ನೇ, 9ನೇ ಹಾಗೂ 10ನೇ ರ‍್ಯಾಂಕ್‌ಗಳನ್ನು ಒಟ್ಟು 9 ವಿದ್ಯಾರ್ಥಿಗಳು ಪಡೆದಿದ್ದಾರೆ.

ವ್ಯವಹಾರ ಅಧ್ಯಯನದಲ್ಲಿ 172, ಗಣಿತದಲ್ಲಿ 138, ಅರ್ಥಶಾಸ್ತ್ರದಲ್ಲಿ 119, ಕಂಪ್ಯೂಟರ್‌ ಸೈನ್ಸನಲ್ಲಿ 102 ಹೀಗೆ ಒಟ್ಟಾರೆಯಾಗಿ ಕೆಎಲ್‌ಇ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 1007 ಸೆಂಟಮ್ಸ (100ಕ್ಕೆ100) ಅಂಕಗಳನ್ನು ಪಡೆದು ಮೈಲುಗಲ್ಲು ನಿರ್ಮಿಸಿದ್ದಾರೆ. 

ಕಲಾ ವಿಭಾಗದಲ್ಲಿ 410, ವಾಣಿಜ್ಯದಲ್ಲಿ 1,251 ವಿದ್ಯಾರ್ಥಿಗಳು, ವಿಜ್ಞಾನದಲ್ಲಿ 2,270 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ (85% ಹೆಚ್ಚು) ಫಲಿತಾಂಶವನ್ನು ಪಡೆದುಕೊಂಡಿದ್ದಾರೆ. 6,163 ವಿದ್ಯಾರ್ಥಿಗಳು ಪ್ರಥಮಸ್ಥಾನದಲ್ಲಿ ಪಾಸಾಗಿರುವುದು ಹೆಮ್ಮೆಯ ಸಂಗತಿ.

ಕೇವಲ ನಗರ ಪ್ರದೇಶಗಳಿಗೆ ಸಿಮೀತವಾಗಿದ್ದ ಐಐಟಿ ಪ್ರವೇಶ ಪರೀಕ್ಷೆ JEE  ರ‍್ಯಾಂಕ್‌ಗಳು ಇಂದು ಕೆಎಲ್‌ಇ ಸಂಸ್ಥೆಯು ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಪ್ರಾರಂಭಿಸಿದ ಇಂಟಿಗ್ರೇಟೆಡ್‌ ಪದವಿಪೂರ್ವ ಕಾಲೇಜುಗಳಿಂದ ಗ್ರಾಮೀಣ ಭಾಗದ  ವಿದ್ಯಾರ್ಥಿಗಳಿಗೂ  ಲಭಿಸುವಂತಾಗಿದೆ.  

ಪ್ರಸಕ್ತ ವರ್ಷದ JEE ಪರೀಕ್ಷೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಅಗ್ರ 500 ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದರೆ, ಮೂವರು ವಿದ್ಯಾರ್ಥಿಗಳು 1,000 ಒಳಗೆ, 5 ವಿದ್ಯಾರ್ಥಿಗಳು 2,000 ಒಳಗೆ, 9 ವಿದ್ಯಾರ್ಥಿಗಳು 5,000 ಒಳಗೆ ಹಾಗೂ 14 ವಿದ್ಯಾರ್ಥಿಗಳು 10,000 ಒಳಗಿನ ರ‍್ಯಾಂಕ್‌ ಪಡೆದಿರುತ್ತಾರೆ.  ಒಟ್ಟಾರೆ 100 ಕ್ಕಿಂತಲೂ ಅಧಿಕ ಕೆಎಲ್‌ಇ ವಿದ್ಯಾರ್ಥಿಗಳು JEE Advance ಪರೀಕ್ಷೆ ಬರೆಯಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. 

ಒಟ್ಟಿನಲ್ಲಿ ಕೆಎಲ್‌ಇ ಸಂಸ್ಥೆಯ ಪದವಿಪೂರ್ವ ಕಾಲೇಜುಗಳು ರಾಜ್ಯದಲ್ಲಿಯೇ ಸರ್ವೋನ್ನತವಾದ ಸಾಧನೆಯನ್ನು ಮಾಡಿವೆ. ವಿದ್ಯಾರ್ಥಿಗಳಿಗೆ ಕಲಿಕಾ ವಾತಾವರಣವನ್ನು ಉಂಟುಮಾಡುವ ಮೂಲಕ ಅವರನ್ನು ಮುಂದಿನ ಉನ್ನತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುತ್ತಿದೆ. ಇದರ ಫಲವಾಗಿಯೇ ರಾಷ್ಟ್ರಮಟ್ಟದ NEET, JEE, CA  ಮೊದಲ್ಗೊಂಡು ಪರೀಕ್ಷೆಗಳಲ್ಲಿ ಕೆಎಲ್‌ಇ ವಿದ್ಯಾರ್ಥಿಗಳು ದಾಖಲಾರ್ಹವಾದ ಸಾಧನೆಯನ್ನು ಮಾಡುತ್ತಿರುವುದೂ ಹಾಗೂ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿ ನಿಂತಿದೆ.

ಕೆಎಲ್ಇ ಸಂಸ್ಥೆಯ ನಿರ್ದೇಶಕರಾದ ಜಯಾನಂದ ಮುನವಳ್ಳಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

Related Articles

Back to top button