*ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಗೆ ಸ್ಥಿರತೆ ಮತ್ತು ಶಿಸ್ತು ಬಹಳ ಮುಖ್ಯ: ಕಿರಣ ಕಮತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ವಿದ್ಯಾರ್ಥಿಗಳಿಗೆ ಸ್ಥಿರತೆ ಮತ್ತು ಶಿಸ್ತು ಬಹಳ ಮುಖ್ಯ. ದಿನಕ್ಕೆ ಹದಿನೆಂಟು ಹತ್ತೊಂಬತ್ತು ಗಂಟೆ ಓದುವುಕ್ಕಿಂತಲೂ ಪ್ರತಿನಿತ್ಯ ಐದು- ಆರು ಗಂಟೆ ಸ್ಥಿರವಾಗಿ ಅಭ್ಯಾಸ ನಡೆಸುವುದು ಅತಿ ಅವಶ್ಯಕ ಎಂದು ಭಾರತೀಯ ಆಡಳಿತ ಸೇವೆಯ ಪರೀಕ್ಷೆಯಲ್ಲಿ ದೇಶಕ್ಕೆ 53 ಮತ್ತು ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಕಿರಣ ಕಮತೆ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುವೆಂಪು ಸಭಾಭವನದಲ್ಲಿ ಮಂಗಳವಾರದಂದು ಆಯೋಜಿಸಿದ್ದ ” ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಮಾರ್ಗದರ್ಶನ ಮತ್ತು ತರಬೇತಿ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಓದುವ ಗಂಟೆಗಳ ಸಂಖ್ಯೆ ಮುಖ್ಯವಲ್ಲ, ಆ ಸಮಯದಲ್ಲಿ ಕಲಿತ ವಿಷಯಗಳ ಗುಣಮಟ್ಟ ಮುಖ್ಯ. ಗಮನವಿಟ್ಟು, ಅರ್ಥಮಾಡಿಕೊಂಡು, ವಿಷಯಗಳ ಆಳಕ್ಕೆ ಇಳಿದು ಓದುವುದು ಮೇಲ್ನೋಟಕ್ಕೆ ಹೆಚ್ಚು ಸಮಯ ಓದುವುದಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಮಾತನಾಡಿ, ವಿದ್ಯಾರ್ಥಿಗಳಿಗೆ ಭಾರತೀಯ ಆಡಳಿತ ಸೇವೆಯ ಪರೀಕ್ಷೆಗೆ ಸಿದ್ಧತೆ ನಡೆಸಲು ಬೇಕಾದ ಎಲ್ಲ ಸಹಾಯವನ್ನು ವಿಶ್ವವಿದ್ಯಾಲಯದ ವತಿಯಿಂದ ಮಾಡಲಾಗುವುದು. ವಿದ್ಯಾರ್ಥಿಗಳು ಸಾಧಕರಿಂದ ಸ್ಫೂರ್ತಿ ಪಡೆದು, ಬದಲಾಗುತ್ತಿರುವ ಕಾಲಘಟ್ಟದಲ್ಲಿ ತಂತ್ರಜ್ಞಾವನ್ನು ಅರಿತು ಹೊಸ ವಿದ್ಯಮಾನಗಳನ್ನು ಕಲಿತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಸಂತೋಷ್ ಕಾಮಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.ಮೌಲ್ಯಮಾಪನ ಕುಲಸಚಿವ ಪ್ರೊ. ಡಿ.ಏನ್. ಪಾಟೀಲ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕರಾದ ಪ್ರೊ. ವಾಯ್.ಎಸ್. ಬಲವಂತಗೊಳ್, ಹಿಂದುಳಿದ ಕಲ್ಯಾಣ ಇಲಾಖೆಯ ಜಿಲ್ಲಾ ನಿರ್ದೇಶಕ ಪ್ರಕಾಶ್ ಹರಗಾಪುರ್, ಸಿಂಡಿಕೇಟ್ ಸದಸ್ಯರಾದ ರಫೀಕ್ ಭಂಡಾರಿ, ಡಾ ಕಿರಣ್ ಕುಮಾರ್ ಪಿ, ಡಾ. ರವಿ ದಳವಾಯಿ, ಡಾ. ರಮೇಶ್ ಕಾಂಬಳೆ, ಡಾ. ಪ್ರಕಾಶ್ ಕಟ್ಟಿಮನಿ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಯಾದ ಪ್ರಲ್ಹಾದ ಬೆವನೂರು ನಡೆಸಿಕೊಟ್ಟರು.


