*ಅತ್ತೆಗೆ ಚಾಕು ಇರಿದು ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕಿದ ಅಳಿಯ*

ಪ್ರಗತಿವಾಹಿನಿ ಸುದ್ದಿ: ಅಳಿಯ ಮಹಾಶಯನೊಬ್ಬ ತನ್ನ ಅತ್ತೆಗೆ ಚಾಕುವಿನಿಂದ ಇರಿದ ಘೋರ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟಿಯಲ್ಲಿ ಈ ಗಹ್ಟನೆ ನಡೆದಿದೆ. ವಿಡಿಯೋ ಕಾಲ್‌ನಲ್ಲಿ ಮಗು ತೋರಿಸಿಲ್ಲ ಎನ್ನುವ ಕಾರಣಕ್ಕೆ ಆಕ್ರೋಶಗೊಂಡ ಅಳಿಯ ಅತ್ತೆಗೆ ಚಾಕು ಇರಿದು ಮೊಬೈಲ್ ನಲ್ಲಿ ಸ್ಟೇಟಸ್ ಹಾಕಿದ್ದಾನೆ.
ಅರವಿಂದ ಗವಳಿ ಅತ್ತೆಗೆ ಚಾಕು ಇರಿದ ಅಳಿಯ. ಮಹಾದೇವಿ (45) ಚಾಕು ಇರಿತಕ್ಕೊಳಗಾದ ಮಹಿಳೆ.ಸದ್ಯ ಮಹಾದೇವಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಅರವಿಂದ ಗವಳಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅರವಿಂದ ಗವಳಿಯ ಪತ್ನಿಗೆ ಎರಡು ತಿಂಗಳ ಹಿಂದೆಯಷ್ಟೇ ಹೆರಿಗೆಯಾಗಿದ್ದು, ಆಕೆ ತವರು ಮನೆಯಲ್ಲಿದ್ದಳು. ಅಲ್ಲಿಯೂ ಪತ್ನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಅರವಿಂದ, ಪದೇಪದೆ ವಿಡಿಯೋ ಕಾಲ್ ಮಾಡಿ ಮಗುವನ್ನು ತೋರಿಸುವಂತೆ ಪಟ್ಟು ಹಿಡಿಯುತ್ತಿದ್ದ. ಇದಕ್ಕೆ ಪ್ರತಿಕ್ರಿಯಿಸಿದ್ದ ಅತ್ತೆ ಮಹಾದೇವಿ, ಕೆಲಸ ಬಿಟ್ಟು ಸದಾ ಮೊಬೈಲ್ ಹಿಡಿದು ಕೂರಲು ಸಾಧ್ಯವಿಲ್ಲ, ದಿನಕ್ಕೆ ಒಂದು ಬಾರಿ ಮಾತ್ರ ಕಾಲ್ ಮಾಡು ಎಂದು ಬುದ್ಧಿ ಹೇಳಿದ್ದರು.
ಇದರಿಂದ ಸಿಟ್ಟಾದ ಅರವಿಂದ ಅತ್ತೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದಕ್ಕೆ ಅತ್ತೆ ನನ್ನ ಮನೆ ಬಾಗಿಲಿಗೆ ಬಂದರೆ ಸುಮ್ಮನೆ ಬಿಡಲ್ಲ ಎಂದು ಎಚ್ಚರಿಸಿದ್ದರು. ಇದರಿಂದ ಕೋಪಗೊಂಡ ಅಳಿಯ ಅತ್ತೆ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಹಾದೇವಿ ಅವರು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚಾಕು ಇರಿದು ಪರಾರಿಯಾದ ಅಳಿಯ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದಾನೆ. ’ಇಂದು ಜೈಲು, ನಾಳೆ ಬೇಲ್… ನಿನ್ನನ್ನು ಬಿಡಲ್ಲ’’ ಎಂದು ಬರೆದುಕೊಂಡು ವಿಕೃತಿ ಮೆರೆದಿದ್ದಾನೆ.




