CrimeKannada NewsNationalPolitics

*ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಗೆದ್ದಿರುವ 65% ಶಾಸಕರ ಮೇಲಿದೆ ಕ್ರಿಮಿನಲ್ ಪ್ರಕರಣ*

ಪ್ರಗತಿವಾಹಿನಿ ಸುದ್ದಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ ಒಟ್ಟು ಶಾಸಕರಲ್ಲಿ ಶೇ. 65 ರಷ್ಟು ಮಂದಿ ತಮ್ಮ ಮೇಲೆ ಕ್ರಿಮಿನಲ್ ಪ್ರಕರಣಗಳಿರುವುದಾಗಿ  ತಿಳಿದು ಬಂದಿದೆ.

ಆಯ್ಕೆಯಾದ 292 ಶಾಸಕರಲ್ಲಿ 190 ಮಂದಿ (ಶೇ. 65) ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. ಕಳೆದ ಬಾರಿ ಈ ಪ್ರಮಾಣ ಶೇ. 49 ರಷ್ಟಿತ್ತು. ಇನ್ನು ಕೇವಲ ಸಣ್ಣಪುಟ್ಟ ಕೇಸ್‌ಗಳಲ್ಲದೆ, ಶೇ. 58 ರಷ್ಟು ಶಾಸಕರು ಕೊಲೆ, ಕೊಲೆ ಯತ್ನ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯದಂತಹ ಗಂಭೀರ ಸ್ವರೂಪದ ಕೇಸ್‌ಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ 14 ಶಾಸಕರ ಮೇಲೆ ಕೊಲೆ ಪ್ರಕರಣ ಹಾಗೂ 63 ಶಾಸಕರ ಮೇಲೆ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಿವೆ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ.

ಪಕ್ಷವಾರು ನೋಡುವುದಾದರೆ, ಬಿಜೆಪಿಯಿಂದ ಗೆದ್ದಿರುವ 206 ಶಾಸಕರಲ್ಲಿ 152 ಮಂದಿ (ಶೇ. 74) ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. ತೃಣಮೂಲ ಕಾಂಗ್ರೆಸ್‌ನ 80 ಶಾಸಕರಲ್ಲಿ 34 ಮಂದಿ (ಶೇ. 43) ಇಂತಹ ಪ್ರಕರಣಗಳನ್ನು ಹೊಂದಿದ್ದಾರೆ. ಸಿಪಿಐ(ಎಂ) ಮತ್ತು ಇತರ ಸಣ್ಣ ಪಕ್ಷಗಳಿಂದ ಗೆದ್ದ ಎಲ್ಲ ಶಾಸಕರೂ ಕ್ರಿಮಿನಲ್ ಕೇಸ್‌ಗಳನ್ನು ಹೊಂದಿದ್ದಾರೆಂದು ವರದಿ ಹೇಳಿದೆ. ಆದರೆ, ಕಾಂಗ್ರೆಸ್‌ನಿಂದ ಗೆದ್ದಿರುವ ಇಬ್ಬರು ಶಾಸಕರ ಮೇಲೆ ಯಾವುದೇ ಕೇಸ್‌ಗಳಿಲ್ಲದಿರುವುದು ವಿಶೇಷ.

ಬರೀ ಅಪರಾಧ ಪ್ರಕರಣಗಳಷ್ಟೇ ಅಲ್ಲದೆ, ಶಾಸಕರ ಆಸ್ತಿ ಮೌಲ್ಯವೂ ಈ ಬಾರಿ ಭಾರಿ ಏರಿಕೆ ಕಂಡಿದೆ. ಒಟ್ಟು ಶಾಸಕರಲ್ಲಿ 178 ಮಂದಿ (ಶೇ. 61) ಕೋಟ್ಯಧಿಪತಿಗಳಾಗಿದ್ದಾರೆ. 2021ರಲ್ಲಿ ಇವರ ಸಂಖ್ಯೆ ಶೇ. 54 ರಷ್ಟಿತ್ತು. ಸದ್ಯ ಗೆದ್ದಿರುವ ಶಾಸಕರ ಸರಾಸರಿ ಆಸ್ತಿ 3.73 ಕೋಟಿ ರೂಪಾಯಿಗಳಾಗಿದೆ. ಇದರಲ್ಲಿ ಟಿಎಂಸಿ ಶಾಸಕರ ಸರಾಸರಿ ಆಸ್ತಿ 5.36 ಕೋಟಿ ರೂ. ಆಗಿದ್ದರೆ, ಬಿಜೆಪಿ ಶಾಸಕರ ಸರಾಸರಿ ಆಸ್ತಿ 2.97 ಕೋಟಿ ರೂ. ಇದೆ. ಅಚ್ಚರಿಯ ವಿಷಯವೆಂದರೆ, ಕಾಂಗ್ರೆಸ್‌ನ ಇಬ್ಬರು ಶಾಸಕರ ಸರಾಸರಿ ಆಸ್ತಿ ಬರೋಬ್ಬರಿ 17.92 ಕೋಟಿ ರೂಪಾಯಿಗಳಷ್ಟಿದೆ.

Home add -Advt

ಶಿಕ್ಷಣ ಮತ್ತು ವಯಸ್ಸಿನ ವಿಷಯಕ್ಕೆ ಬಂದರೆ, ಶೇ. 63 ರಷ್ಟು ಶಾಸಕರು ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದಿದ್ದಾರೆ. ಉಳಿದವರು 5 ರಿಂದ 12ನೇ ತರಗತಿಯವರೆಗೆ ಓದಿದವರಾಗಿದ್ದಾರೆ. ಇವರಲ್ಲಿ ಒಬ್ಬ ಶಾಸಕ ತಮಗೆ ಅಕ್ಷರ ಜ್ಞಾನವೇ ಇಲ್ಲವೆಂದು ಘೋಷಿಸಿಕೊಂಡಿದ್ದಾರೆ. ಹಾಗೆಯೇ ಶೇ. 63 ರಷ್ಟು ಶಾಸಕರು 41 ರಿಂದ 60 ವರ್ಷ ವಯಸ್ಸಿನವರಾಗಿದ್ದು ಮಹಿಳೆಯರ ಪ್ರಾತಿನಿಧ್ಯ ಮಾತ್ರ ಈ ಬಾರಿ ಕುಸಿದಿದೆ. ಒಟ್ಟು ಶಾಸಕರಲ್ಲಿ ಕೇವಲ 37 ಮಂದಿ ಮಾತ್ರ ಮಹಿಳೆಯರಿದ್ದು ಇದು ಕಳೆದ ಬಾರಿಗಿಂತಲೂ ಕಡಿಮೆಯಾಗಿದೆ. 

Related Articles

Back to top button