Belagavi NewsBelgaum NewsKannada NewsKarnataka NewsPolitics

*ಡಾ.ಜಿ.ಪರಮೇಶ್ವರ್ ನಮ್ಮವರೇ, ಡಿಸಿಎಂ ಸ್ಥಾನ ಸಿಕ್ಕಿದ್ದಕ್ಕೆ ನಾವು ತೃಪ್ತಿಪಡಬೇಕು: ಸಚಿವ ಸತೀಶ್‌ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಕ್ಷದಲ್ಲಿ ಯಾರಿಗೂ ಅನ್ಯಾಯವಾಗಿಲ್ಲ ಮತ್ತು ಎಲ್ಲರಿಗೂ ಒಂದೇ ಬಾರಿಗೆ ಎಲ್ಲವೂ ಸಿಗಲು ಸಾಧ್ಯವಿಲ್ಲ  ಡಿಸಿಎಂ ಜಿ. ಪರಮೇಶ್ವರ್ ಅವರು ನಮ್ಮವರೇ. ಹೈಕಮಾಂಡ್ ಅವರಿಗೆ ಜವಾಬ್ದಾರಿ ನೀಡಿದೆ, ಅಷ್ಟಕ್ಕೇ ನಾವು ತೃಪ್ತಿಪಡಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ಬೆಳಗಾವಿ ಕಾಂಗ್ರೆಸ್‌ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಒಬ್ಬರಿಗೆ ಒಂದು ಸ್ಥಾನ ಎನ್ನುವ ಕಾರಣದಿಂದ ಅಧ್ಯಕ್ಷ ಸ್ಥಾನ ಸಿಗಲಿಲ್ಲ. ಈ ಹಿಂದೆ ಇಂತಹ ಪರಿಸ್ಥಿತಿ ಇರಲಿಲ್ಲ, ಆದರೆ ಈಗ ಪಕ್ಷದ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು ಎಂದು ತಿಳಿಸಿದರು.

ಇನ್ನು ಡಾ. ಜಿ. ಪರಮೇಶ್ವರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ದೊರೆಯುವಲ್ಲಿ ಸಿದ್ದರಾಮಯ್ಯನವರ ಪ್ರಯತ್ನ ಮತ್ತು ಬೆಂಬಲ ಪ್ರಮುಖ ಕಾರಣ. ಸಿದ್ದರಾಮಯ್ಯನವರು ತಮ್ಮ ಒಡನಾಡಿಗಳು ಮತ್ತು ಪಕ್ಷದ ಹಿರಿಯ ನಾಯಕರಿಗೆ ಸೂಕ್ತ ಸ್ಥಾನಮಾನ ಕೊಡಿಸಲು ಸದಾ ಶ್ರಮಿಸಿದ್ದಾರೆ ಎಂಬುದನ್ನು ಒತ್ತಿ ಹೇಳಿದರು.

ಶೋಷಿತ ಸಮುದಾಯಗಳನ್ನು ಟಾರ್ಗೆಟ್ ಮಾಡುವುದು ಇದೇ ಮೊದಲಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ನಮಗೆ ಸಿಗಬೇಕಾದ ಪ್ರಾಮುಖ್ಯತೆ ಸಿಕ್ಕಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ವಿರೋಧಿಗಳು ಅವಕಾಶ ಸಿಕ್ಕಾಗಲೆಲ್ಲಾ ಅಪಪ್ರಚಾರ ಮಾಡುವುದು ಸಹಜ ಎಂದು ಅವರು ಹೇಳಿದ್ದಾರೆ.

Home add -Advt

ಶೋಷಿತ ಸಮುದಾಯಗಳು ಹಲವು ಬಾರಿ ಟಾರ್ಗೆಟ್ ಆಗಿವೆ. ಶೋಷಿತರನ್ನು ಗುರಿಯಾಗಿಸುವುದು ಇದೇ ಮೊದಲಲ್ಲ. ವಿರೋಧಿಗಳು ಸಿಕ್ಕಾಗಲೆಲ್ಲಾ ಅಪಪ್ರಚಾರ ಮಾಡುವುದು ಸಹಜ. ಪಕ್ಷದಲ್ಲಿ ಯಾರಿಗೂ ಅನ್ಯಾಯವಾಗಿಲ್ಲ. ನಮಗೆ ಸಿಗಬೇಕಾದ ಪ್ರಾಮುಖ್ಯತೆ ಖಂಡಿತ ಸಿಕ್ಕಿದೆ. ನಿರೀಕ್ಷೆ ಮೀರಿ ಪಕ್ಷ ನಮ್ಮನ್ನು ಪರಿಗಣಿಸಿದೆ ಎಂದು ತಿಳಿಸಿದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾಯಿಸಿದರೆ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ 40 ಸೀಟುಗಳನ್ನೂ ಗೆಲ್ಲಲು ಸಾಧ್ಯವಿಲ್ಲ ಎಂಬ ಎಂಎಲ್‌ಸಿ ಲಖನ್ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಲಖನ್ ಜಾರಕಿಹೊಳಿ ಅಷ್ಟೇ ಈ ಹೇಳಿಕೆ ನೀಡಿಲ್ಲ, ಬಿಜೆಪಿಯ ಹಲವರು ಹೇಳಿದ್ದಾರೆ.  ಲಖನ್ ಜಾರಕಿಹೊಳಿ ಹೇಳಿಕೆ ಅವರ ವೈಯಕ್ತಿಕ ನಿಲುವು. ಈ ಹೇಳಿಕೆ ಬಗ್ಗೆ ನೀವು ಅವರನ್ನೇ ಕೇಳಿ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದಕ್ಕೆ ನಿಮ್ಮ ಕಾರ್ಯಕರ್ತರು ನಿರಾಶೆ ಆಗಿದ್ದಾರೆಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದಲ್ಲಿ ತಾಳ್ಮೆಯಿಂದ ಕಾಯ್ದವರಿಗೆ ಯಾವಾಗಲೂ ಒಳ್ಳೆಯ ಅವಕಾಶ ಸಿಕ್ಕಿದೆ. ಕಾಲ ಇನ್ನೂ ಮಿಂಚಿಲ್ಲ, ಪಕ್ಷಕ್ಕಾಗಿ ಶ್ರಮಿಸುವ ಮತ್ತು ತಾಳ್ಮೆಯಿಂದ ಇರುವ ನಾಯಕರಿಗೆ ಸೂಕ್ತ ಸಮಯದಲ್ಲಿ ಹೈಕಮಾಂಡ್ ಮನ್ನಣೆ ನೀಡಲಿದೆ. ನನಗೂ ಪಕ್ಷ ಒಳ್ಳೆಯ ಸ್ಥಾನ ನೀಡಿದೆ. ಕಾರ್ಯಕರ್ತರು ಧೃತಿಗೆಡಬೇಕಾದ ಅಗತ್ಯವಿಲ್ಲ ಎಂದು ಧೈರ್ಯ ತುಂಬುವ ಮಾತುಗಳನ್ನಾಡಿದರು.  

ಇದೇ ವೆಳೆ ಅಹಿಂದ ನಾಯಕತ್ವದ ಕುರಿತು ಮಾತನಾಡಿದ ಸಚಿವರು, ರಾಜಕೀಯದಲ್ಲಿ ಕೇವಲ ಅಧಿಕಾರ ಹಿಡಿಯುವುದಷ್ಟೇ ನಾಯಕತ್ವ ಅಲ್ಲ. ನಿಜವಾದ ಅಹಿಂದ ನಾಯಕರಾಗಲು ತನ್ನದೇ ಆದ ಸಿದ್ಧಾಂತ ಮತ್ತು ಬದ್ಧತೆಯ ಅವಶ್ಯಕತೆ ಇರುತ್ತದೆ. ಯಾರೋ ಒಬ್ಬರು ನಾಯಕರಾಗಲು ಕೇವಲ ಒಂದು ಸಮುದಾಯದ ಬೆಂಬಲ ಅಥವಾ ರಾಜಕೀಯ ಸ್ಥಾನಮಾನವಿದ್ದರೆ ಸಾಲದು. ಅದರ ಹಿಂದೆ ಬಲವಾದ ಸಿದ್ಧಾಂತವಿರಬೇಕು. ಸಿದ್ಧಾಂತದ ಅಡಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಮಾತ್ರ ಜನಸಾಮಾನ್ಯರ ಮನಸ್ಸಿನಲ್ಲಿ ಜನನಾಯಕರಾಗಿ ಬೆಳೆಯಲು ಸಾಧ್ಯ. ಈ ಸಿದ್ದಾಂತನ್ನು ಪ್ರತಿಪ್ರಾದಿಸುವವರು ಅಹಿಂದವನ್ನು ಮುನ್ನಡೆಸುತ್ತಾರೆಂದರು.

ವರಿಷ್ಠರ ಜೊತೆ ಚರ್ಚಿಸಿದ್ದೇನೆ, ಸಚಿವ ಸ್ಥಾನ ಖಚಿತ: ಇದೇ ಸಂದರ್ಭದಲ್ಲಿ ಜಿಲ್ಲಾ ರಾಜಕಾರಣ ಮತ್ತು ಸಂಪುಟ ವಿಸ್ತರಣೆಯ ಕುರಿತು ಮಾತನಾಡಿದ ಅವರು, ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ ಸಿಗುವ ಕುರಿತು ದೃಢ ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದು, ಇಲ್ಲಿನ ರಾಜಕೀಯ ಪ್ರಾತಿನಿಧ್ಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆಯ ಕುರಿತು ನಾನು ಈಗಾಗಲೇ ಪಕ್ಷದ ವರಿಷ್ಠರೊಂದಿಗೆ ಮಾತನಾಡಿದ್ದೇನೆ. ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ ಸಿಕ್ಕೆ ಸಿಗುತ್ತದೆ ಎಂಬ ಸಂಪೂರ್ಣ ಭರವಸೆ ನನಗಿದೆ,” ಎಂದರು.

ಇನ್ನು ಬೆಳಗಾವಿ ಫ್ಲೈಓವರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದ್ದು, ಮುಂದಿನ ತಿಂಗಳಿನಿಂದಲೇ ಅಧಿಕೃತವಾಗಿ ಕಾಮಗಾರಿ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ ಸಚಿವರು, ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆ ಪರವಾನಗಿ ರದ್ದುಗೊಂಡಿತ್ತು. ಇದರಿಂದ ವರ್ತಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಡೇ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ವರ್ತಕರಿಗೆ 3 ತಿಂಗಳು ಕಾಲಾವಕಾಶ ನೀಡಲಾಗಿತ್ತು. ಈಗ ಶಾಶ್ವತ ಪರಿಹಾರಕ್ಕಾಗಿ ಉನ್ನತ ಮಟ್ಟದ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದರು. 

ಅದ್ಧೂರಿ ಸ್ವಾಗತ, ಸತ್ಕಾರ: ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಸತೀಶ್‌ ಜಾರಕಿಹೊಳಿ ಅವರಿಗೆ ಜಿಲ್ಲೆಯ ಗಡಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಇದೇ ವೇಳೆ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಪ್ರಮುಖ ಮುಖಂಡರು ಸಚಿವರನ್ನು ಭೇಟಿಯಾಗಿ ಪುಷ್ಪಗುಚ್ಛ ನೀಡಿ, ಅತ್ಯಂತ ಗೌರವಪೂರ್ವಕವಾಗಿ ಸತ್ಕರಿಸಿದರು.

ಸತ್ಕಾರ ಸ್ವೀಕರಿಸಿ ಮಾತನಾಡಿದ ಸಚಿವರು, ಮುಖಂಡರು ಮತ್ತು ಸಾರ್ವಜನಿಕರ ನಿರೀಕ್ಷೆಗೆ ತಕ್ಕಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಾಗೂ ಕನ್ನಡ ನೆಲ, ಜಲದ ರಕ್ಷಣೆಗೆ ಸದಾ ಶ್ರಮಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ನಾಯಕರು, ಪ್ರಮುಖ ಮುಖಂಡರು ಹಾಗೂ ನೂರಾರು ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.

Related Articles

Back to top button