Belagavi NewsBelgaum NewsKannada NewsKarnataka NewsPolitics

*ಸುವರ್ಣ ವಿಧಾನಸೌಧದಲ್ಲಿ ಮುಂಗಾರು ಅಧಿವೇಶನ ಅನುಮಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ವರ್ಷದ ವಿಧಾನಮಂಡಲ ಮುಂಗಾರು ಅಧಿವೇಶನವನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಸುವ ಕುರಿತು ರಾಜ್ಯ ಸರ್ಕಾರ ಹಿಂದೆ ತೆಗೆದುಕೊಂಡಿದ್ದ ನಿರ್ಧಾರವನ್ನು ಮರುಪರಿಶೀಲಿಸಲಾಗಿದ್ದು, ಅಧಿವೇಶನವನ್ನು ಬೆಂಗಳೂರಿನಲ್ಲೇ ನಡೆಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಜುಲೈ ಎರಡನೇ ವಾರದಲ್ಲಿ ಬೆಳಗಾವಿಯಲ್ಲಿ ಮುಂಗಾರು ಅಧಿವೇಶನ ನಡೆಸುವ ಬಗ್ಗೆ ಪ್ರಾಥಮಿಕ ತೀರ್ಮಾನ ಕೈಗೊಂಡಿತ್ತು. ಆದರೆ, ರಾಜ್ಯ ರಾಜಕೀಯ ಬೆಳವಣಿಗೆಗಳು ಹಾಗೂ ಆಡಳಿತಾತ್ಮಕ ಕಾರಣಗಳಿಂದಾಗಿ ಆ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎನ್ನಲಾಗಿದೆ.

ಸಚಿವ ಸಂಪುಟ ವಿಸ್ತರಣೆ ಸರ್ಕಾರದ ಮುಂದಿರುವ ಪ್ರಮುಖ ರಾಜಕೀಯ ಪ್ರಕ್ರಿಯೆಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಈ ಬೆಳವಣಿಗೆಗಳ ಮೇಲೆ ನಿಕಟ ನಿಗಾ ಇಟ್ಟಿರುವ ಹಿನ್ನೆಲೆಯಲ್ಲಿ ಅಧಿವೇಶನವನ್ನು ಬೆಂಗಳೂರಿನಲ್ಲೇ ನಡೆಸಲು ಸರ್ಕಾರ ಒಲವು ತೋರಿದೆ ಎಂದು ಹೇಳಲಾಗುತ್ತಿದೆ. ಸರ್ಕಾರದ ಹಿಂದಿನ ಸೂಚನೆಯಂತೆ ಬೆಳಗಾವಿ ಜಿಲ್ಲಾಡಳಿತ ಅಧಿವೇಶನಕ್ಕೆ ಅಗತ್ಯವಾದ ಪೂರ್ವಸಿದ್ಧತೆಗಳನ್ನು ಈಗಾಗಲೇ ಆರಂಭಿಸಿತ್ತು. ಶಾಸಕರು, ಹಿರಿಯ ಅಧಿಕಾರಿಗಳು ಹಾಗೂ ಆಗಮಿಸುವ ಅತಿಥಿಗಳ ವಸತಿ, ಭದ್ರತೆ, ಸಾರಿಗೆ ಸೇರಿದಂತೆ ವಿವಿಧ ವ್ಯವಸ್ಥೆಗಳ ಕುರಿತು ಸಭೆಗಳನ್ನೂ ನಡೆಸಲಾಗಿತ್ತು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಕೂಡ ಬೆಳಗಾವಿಯಲ್ಲಿ ಮುಂಗಾರು ಅಧಿವೇಶನ ನಡೆಸುವ ಪರವಾಗಿ ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರಿಂದ ಅಧಿವೇಶನ ಸುವರ್ಣ ವಿಧಾನಸೌಧದಲ್ಲೇ ನಡೆಯಲಿದೆ ಎಂಬ ನಿರೀಕ್ಷೆ ಬಲಗೊಂಡಿತ್ತು.

Home add -Advt

ಆದರೆ, ಇತ್ತೀಚಿನ ದಿನಗಳಲ್ಲಿ ಅಧಿವೇಶನದ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಯಾವುದೇ ಹೊಸ ನಿರ್ದೇಶನಗಳು ಬಂದಿಲ್ಲ. ಇದರಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಪ್ರಸ್ತಾವನೆ ಕೈಬಿಡಲಾಗಿದೆಯೇ ಎಂಬ ಅನುಮಾನ ಅಧಿಕಾರಿಗಳ ವಲಯದಲ್ಲಿ ಮೂಡಿದೆ.

ಆದಾಗ್ಯೂ, ಈ ಕುರಿತು ರಾಜ್ಯ ಸರ್ಕಾರದಿಂದ ಇನ್ನೂ ಅಧಿಕೃತ ಘೋಷಣೆ ಹೊರಬೀಳಬೇಕಿದ್ದು, ಅಂತಿಮ ನಿರ್ಧಾರದತ್ತ ರಾಜಕೀಯ ವಲಯ ಹಾಗೂ ಉತ್ತರ ಕರ್ನಾಟಕದ ಜನತೆ ಕಾತರದಿಂದ ಎದುರು ನೋಡುತ್ತಿದ್ದಾರೆ.

Related Articles

Back to top button