
ಪ್ರಗತಿವಾಹಿನಿ ಸುದ್ದಿ: ಸತತವಾಗಿ ಸುರಿದ ಮಳೆಗೆ ಮಣ್ಣು ಕುಸಿದು ತಾಯಿ ಹಾಗೂ ಇಬ್ಬರು ಮಕ್ಕಳು ಜೀವಂತ ಸಮಾಧಿಯಾಗಿರುವ ಘಟನೆ ನಡೆದಿದೆ.
ಮಂಗಳೂರು ನಗರದ ಕಂಕನಾಡಿ ನಾಗುರಿ ಬಳಿ ಈ ದುರ್ಘಟನೆ ನಡೆದಿದೆ. ಮೃತಪಟ್ಟವರೆಲ್ಲರೂ ಮೂಲತಃ ಬಿಹಾರದವರಾಗಿದ್ದು ಮಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.
ನಿರಂತರ ಮಳೆಯ ಆರ್ಭಟಕ್ಕೆ ನಾಗುರಿಯಲ್ಲಿರುವ ಕಂಕನಾಡಿ ನಗರ ಪೊಲೀಸ್ ಠಾಣೆಯ ಸಮೀಪದಲ್ಲೇ ಇದ್ದ ಹಳೇ ಮನೆಯೊಂದರ ಮೇಲೆ ಪಕ್ಕದ ಗುಡ್ಡದ ದರೆ (ಮಣ್ಣಿನ ರಾಶಿ) ಕುಸಿದು ಬಿದ್ದಿದೆ.
ದರೆ ಕುಸಿದ ರಭಸಕ್ಕೆ ಮನೆಯಲ್ಲಿದ್ದ ನಾಲ್ವರು ಕಣ್ಣಿಮಿಟುಕಿಸುವಷ್ಟರಲ್ಲಿ ಮಣ್ಣಿನಡಿ ಸಿಲುಕಿಕೊಂಡಿದ್ದಾರೆ. ಘಟನೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅದೃಷ್ಟವಶಾತ್ ಮನೆಯಲ್ಲಿದ್ದ ಇನ್ನುಳಿದವರನ್ನು ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ, ಎಸ್ಡಿಆರ್ಎಫ್ (SDRF) ಮತ್ತು ಪೊಲೀಸ್ ಪಡೆ ತಕ್ಷಣವೇ ಸ್ಥಳಕ್ಕೆ ಧಾವಿಸಿದೆ. ಜೆಸಿಬಿ ಮೂಲಕ ಮನೆ ಮೇಲೆ ಬಿದ್ದಿರುವ ಭಾರಿ ಪ್ರಮಾಣದ ಮಣ್ಣನ್ನು ತೆರವುಗೊಳಿಸುವ ಕಾರ್ಯ ಚುರುಕಿನಿಂದ ಸಾಗುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯ ನಡುವೆಯೇ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.



