*ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯನ್ನಾಗಿಸಲು ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ: ಸಚಿವ ಸತೀಶ್ ಜಾರಕಿಹೊಳಿ*

ಚಿಕ್ಕೋಡಿ ಜನರ ಸಮಸ್ಯೆಗಳ ಪರಿಹಾರಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭರವಸೆ
ಪ್ರಗತಿವಾಹಿನಿ ಸುದ್ದಿ: ಚಿಕ್ಕೋಡಿ: ಚಿಕ್ಕೋಡಿ ಭಾಗದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಒದಗಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಮಳೆ ಕೊರತೆಯಿಂದಾಗಿ ಹಲವೆಡೆ ಬೆಳೆ ಹಾನಿಯಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಈ ಕುರಿತು ಸಮಗ್ರ ಜಂಟಿ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಮೀಕ್ಷಾ ವರದಿ ಬಂದ ತಕ್ಷಣವೇ ಸಂತ್ರಸ್ತ ರೈತರಿಗೆ ಪರಿಹಾರ ನೀಡುವ ಕುರಿತು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಚಿಕ್ಕೋಡಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ಹಾಗೂ ಸಾರ್ವಜನಿಕರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಪ್ರಸ್ತುತ ರಾಜ್ಯದಲ್ಲಿ ಹಾಗೂ ವಿಶೇಷವಾಗಿ ಚಿಕ್ಕೋಡಿ ಭಾಗದಲ್ಲಿ ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ ಸದ್ಯಕ್ಕೆ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಮತ್ತು ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಸಚಿವರು ಆಶಾವಾದ ವ್ಯಕ್ತಪಡಿಸಿದರು.
ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ರಚನೆಗೆ ಸುಳಿವು: ಬೆಳಗಾವಿ ಜಿಲ್ಲಾ ವಿಭಜನೆ ಹಾಗೂ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ಕುರಿತಾದ ದೀರ್ಘಕಾಲದ ಬೇಡಿಕೆಗೆ ಉತ್ತರಿಸಿದ ಸಚಿವರು, ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗಲಿವೆ. ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆಗಳು ನಡೆದಿವೆ ಎಂದು ಪ್ರಮುಖ ಸುಳಿವು ನೀಡಿದರು.
ರಾಜಕೀಯ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಣೆ: ಇದೇ ವೇಳೆ, ಬೆಳಗಾವಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಭೆ ಹಾಗೂ ಅದರಿಂದ ಅನಾಹುತವಾಗಲಿದೆ ಎಂಬ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಯ ಕುರಿತು ಪ್ರತಿಕ್ರಿಯಿಸಲು ಸಚಿವರು ನಿರಾಕರಿಸಿದರು. “ಆ ವಿಚಾರದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ” ಎಂದು ನುಡಿದರು.
ಗಾನ ಕೋಗಿಲೆ ಎಸ್. ಜಾನಕಿ ನಿಧನಕ್ಕೆ ತೀವ್ರ ಸಂತಾಪ: ಖ್ಯಾತ ಗಾಯಕಿ, ಗಾನ ಕೋಗಿಲೆ ಎಸ್. ಜಾನಕಿ ಅವರ ನಿಧನದ ವಾರ್ತೆಗೆ ಸಚಿವ ಸತೀಶ್ ಜಾರಕಿಹೋಳಿ ತೀವ್ರ ಕರಳು ವ್ಯಕ್ತಪಡಿಸಿದರು. “ಎಸ್. ಜಾನಕಿ ಅವರು ಭಾರತೀಯ ಚಿತ್ರರಂಗದ ಶ್ರೇಷ್ಠ ಗಾಯಕಿಯಾಗಿದ್ದರು. ಅವರ ನಿಧನದಿಂದ ಕರ್ನಾಟಕಕ್ಕೆ ಹಾಗೂ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ” ಎಂದು ಹೇಳಿ, ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಿದರು.
ಅರ್ಹರಿಗೆ ಮಾತ್ರ ಶಾಶ್ವತ ನಿವಾಸಿ ಪತ್ರ; ದಾಖಲೆ ಪರಿಶೀಲಿಸಿ ಕ್ರಮ: ಅಕ್ರಮ ವಲಸಿಗರಿಗೆ ಶಾಶ್ವತ ನಿವಾಸಿ ಪತ್ರ ನೀಡಲಾಗುತ್ತಿದೆ ಎಂಬ ಬಿಜೆಪಿ ನಾಯಕರ ಟೀಕೆಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಯಾರು ನಿಜವಾಗಿಯೂ ಇಲ್ಲಿನ ಮೂಲ ನಿವಾಸಿಗಳಾಗಿದ್ದಾರೋ, ಅವರಿಗೆ ಮಾತ್ರ ನಿಯಮಾನುಸಾರ ಶಾಶ್ವತ ನಿವಾಸಿ ಪತ್ರ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ ಅವರು, ಈ ವಿಷಯದಲ್ಲಿ ವಿರೋಧ ಪಕ್ಷಗಳು ಮಾಡುತ್ತಿರುವ ರಾಜಕೀಯ ಟೀಕೆಗಳಿಗೆ ಯಾವುದೇ ಆಧಾರವಿಲ್ಲ ಎಂದರು.ಅಕ್ರಮ ವಲಸಿಗರಿಗೆ ನಿಯಮಬಾಹಿರವಾಗಿ ಶಾಶ್ವತ ನಿವಾಸಿ ಪತ್ರ ನೀಡಲು ಬರುವುದಿಲ್ಲ. ಅರ್ಜಿ ಸಲ್ಲಿಸಿದವರು ಎಷ್ಟು ದಿನಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಕಡ್ಡಾಯವಾಗಿ ದಾಖಲೆಗಳ ಮೂಲಕ ಪರಿಶೀಲಿಸಲಾಗುತ್ತದೆ. ಸೂಕ್ತ ದಾಖಲಾತಿಗಳು ಇದ್ದರೆ ಮಾತ್ರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬಿಜೆಪಿ ನಾಯಕರ ಆರೋಪಗಳಿಗೆ ತಿರುಗೇಟು ನೀಡಿದ ಸಚಿವರು, “ಯಾರು ಇಲ್ಲಿನ ನಿವಾಸಿಗಳಲ್ಲವೋ ಮತ್ತು ಯಾರ ಬಳಿ ನಕಲಿ ದಾಖಲೆಗಳಿವೆಯೋ, ಅಂತಹವರ ಬಗ್ಗೆ ನಿರ್ದಿಷ್ಟ ಪುರಾವೆಗಳಿದ್ದರೆ ನೀಡಲಿ. ಅನರ್ಹರನ್ನು ಪತ್ತೆಹಚ್ಚಲು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮಲ್ಲಿ ಕಟ್ಟುನಿಟ್ಟಾದ ಕಾನೂನುಗಳಿವೆ. ಕಾನೂನಿನ ಚೌಕಟ್ಟನ್ನು ಮೀರಿ ಯಾರೊಬ್ಬರಿಗೂ ಯಾವುದೇ ಸೌಲಭ್ಯ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.




