*ಪ್ರಸಿದ್ಧ ಪುರಿ ಶ್ರೀ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ: ಓರ್ವ ಸಾವು, 200ಕ್ಕೂ ಹೆಚ್ಚು ಭಕ್ತರಿಗೆ ಗಾಯ*

ಪ್ರಗತಿವಾಹಿನಿ ಸುದ್ದಿ: ಪುರಿ ಶ್ರೀ ಜಗನ್ನಾಥ ರಥಯಾತ್ರೆ ವೇಳೆ ಗ್ರಾಂಡ್ ರಸ್ತೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಓರ್ವ ಭಕ್ತ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಭಕ್ತರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಒಡಿಶಾದ ಪುರಿಯಲ್ಲಿ ಆರಂಭವಾದ ಐತಿಹಾಸಿಕ ರಥಯಾತ್ರೆ ವೇಳೆ ಈ ದುರಂತ ಸಂಭವಿಸಿದೆ. ಭಾರೀ ಜನಸಂದಣಿಯಿಂದ ಹಲವು ಭಕ್ತರಿಗೆ ಉಸಿರಾಟದ ತೊಂದರೆ ಉಂಟಾಗಿದ್ದು, ಪರಿಸ್ಥಿತಿ ಏಕಾಏಕಿ ನಿಯಂತ್ರಣ ತಪ್ಪಿದ ಪರಿಣಾಮ ಕಾಲ್ತುಳಿತ ಸಂಭವಿಸಿದೆ. ಗಾಯಗೊಂಡವರನ್ನು ತಕ್ಷಣ ರಕ್ಷಿಸಿ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವಿಶೇಷ ರಕ್ಷಣಾ ಘಟಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು. ಬಳಿಕ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಒದಗಿಸಲಾಯಿತು.
ಘಟನೆಯ ನಂತರ ಯಾತ್ರಾ ಮಾರ್ಗದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಜನಸಂದಣಿಯನ್ನು ನಿಯಂತ್ರಿಸಲು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರತಿ ವರ್ಷ ನಡೆಯುವ ಈ ಮಹತ್ವದ ರಥಯಾತ್ರೆಯಲ್ಲಿ ಶ್ರೀ ಜಗನ್ನಾಥ, ಅಣ್ಣ ಬಲಭದ್ರ ಮತ್ತು ತಂಗಿ ಸುಭದ್ರೆ ರಥಗಳಲ್ಲಿ ಗುಂಡಿಚಾ ದೇವಾಲಯದತ್ತ ಪಯಣ ಬೆಳೆಸುವ ಸಂಪ್ರದಾಯವಿದ್ದು, ಈ ದಿವ್ಯ ಕ್ಷಣವನ್ನು ಕಣ್ಣುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಪುರಿಗೆ ಆಗಮಿಸುತ್ತಾರೆ.


