ಮನೆ ಮಾರಿಯಾದರೂ ಹಣ ಕೊಡುತ್ತೇನೆ: ನಟ ದ್ವಾರಕೀಶ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮನೆ ಮಾರಿಯಾದರೂ ನಾನು ಹಣ ಕೊಡುತ್ತೇನೆ. ಸಿನಿಮಾ ಬಿಟ್ಟು ಬೇರೆ ಏನೂ ಮಾಡಿಲ್ಲ. ಸಿನಿಮಾದಲ್ಲೇ ಜೀವನ ಕಳೆದಿದ್ದೇನೆ ಎಂದು ಹಿರಿಯ ನಟ ದ್ವಾರಕೀಶ್ ಹೇಳಿದ್ದಾರೆ.

ಫೈನಾಶಿಯರ್ ರಮೇಶ್ ದ್ವಾರಕೀಶ್ ಮನೆಯಲ್ಲಿ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದ್ವಾರಕೀಶ್ ಹಾಗೂ ಪುತ್ರ ಯೋಗೇಶ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ದ್ವಾರಕೀಶ್, ಗಲಾಟೆ ನಡೆದ ದಿನ ನನ್ನ ಮಗ ಮನೆಯಲ್ಲಿ ಇರಲಿಲ್ಲ. ನಾನು ಮತ್ತು ನನ್ನ ಹೆಂಡತಿ ಮಾತ್ರ ಮನೆಯಲ್ಲಿದ್ವಿ. ನನಗೆ 78 ವರ್ಷ, ನನ್ನ ಹೆಂಡತಿಗೂ 78 ವರ್ಷ. ಮನೆಯಲ್ಲಿ ಇಬ್ಬರೇ ಇದ್ವಿ. ಮಧ್ಯಾಹ್ನ ಮನೆ ಬಳಿ ಬಂದವರು ಜೋರಾಗಿ ಬಾಗಿಲು ಬಡಿಯುತ್ತಿದ್ದರು. ನಾನು ಹೋಗಿ ಬಾಗಿಲು ತೆಗೆದೆ. ಏಕಾಏಕಿ ಜಯಣ್ಣ, ರಮೇಶ್ ಸೇರಿ ನಾಲ್ಕು ಜನ ಮನೆಯೊಳಗೆ ನುಗ್ಗಿದರು.

ಬಂದ ತಕ್ಷಣ ನಿಮ್ಮ ಮಗ ಹಾಗೆ ಮಾಡಿದ್ದಾನೆ, ಹೀಗೆ ಮಾಡಿದ್ದಾನೆ ಎಂದು ಕೋಗಾಡಲು ಆರಂಭಿಸಿದರು. ನಿಮ್ಮನ್ನ ಊಡೀಸ್ ಮಾಡುತ್ತೀವಿ ಎಂದು ಧಮ್ಕಿ ಕೂಡ ಹಾಕಿದರು. ಸ್ವಲ್ಪ ಸಮಯ ನೀಡಿದರೆ ಹಣ ಕೊಡುತ್ತೇನೆ. ಗಲಾಟೆಯಾದ ಕಾರಣ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಗಿ ತಿಳಿಸಿದರು.

ಇದೇ ವೇಳೆ ಪುತ್ರ ಯೋಗೇಶ್ ಮಾತನಾಡಿ, ಜಯಣ್ಣ ಬೇರೆಯವರಲ್ಲ, ನನಗೆ ಶತ್ರುವಲ್ಲ. ಅವರು ನನಗೆ ಕ್ಲೋಸ್ ಫ್ರೇಂಡ್. ದೊಡ್ಡ ಸಿನಿಮಾ ಅಲ್ವಾ ತುಂಬಾ ಜನರು ಬಂದಿದ್ದರು. ಕೆ. ಮಂಜು ಅವರೇ 9 ಕೋಟಿ ಆಫರ್ ಕೊಟ್ಟಿದ್ದರು. ಆದರೆ ಜಯಣ್ಣ ನಾನೇ ಮಾಡುತ್ತೀವಿ ಎಂದರು. ಆದರೆ ಸಿನಿಮಾ ಸೋತಿದ್ದಕ್ಕೆ ಈ ರೀತಿ ಮಾಡುತ್ತಿದ್ದಾರೆ. ಸಿನಿಮಾ ಗೆದ್ದಾಗ ನಾವೆಲ್ಲರೂ ಬೇಕು, ಸೋತಾಗ ನಾವೊಬ್ಬರೇ ಅನುಭವಿಸಬೇಕು. ನಾವು ಯಾವತ್ತೂ ಯಾರಿಗೂ ಮೋಸ ಮಾಡಿಲ್ಲ. ಒಂದು ಸಿನಿಮಾ ಸೋತರೆ ಮುಂದಿನ ಸಿನಿಮಾದಲ್ಲಿ ಕ್ಲೀಯರ್ ಮಾಡುತ್ತೀವಿ ಎಂದರು.

ಹಣ ವಾಪಸ್ ಕೇಳೋಕು ಒಂದು ರೀತಿ ಇದೆ. ಆದರೆ ಈ ರೀತಿ ಧಮ್ಕಿ ಹಾಕೋದಲ್ಲ. ಒಂದು ವರ್ಷ ಸಮಯ ಕೊಡಿ ಎಂದು ಕೇಳಿದ್ದೆ. ನಮಗೆ ಕನ್ನಡ ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ. ನಮ್ಮ ತಂದೆ 50 ವರ್ಷದಿಂದ ಇದ್ದಾರೆ, ನಾನು 30 ವರ್ಷದಿಂದ ಇದ್ದೇನೆ. ಆದರೆ ಮನೆಯ ಬಳಿ ಬಂದು ಗಲಾಟೆ ಮಾಡೋದು ತಪ್ಪು. ಇನ್ನು ರಮೇಶ್ ಅವರಿಗೆ ನಮಗೂ ಯಾವುದೇ ಸಂಬಂಧ ಇಲ್ಲ. ಆದರೆ ಅವರು ಅಪ್ಪನ ಬಳಿ ಬಂದು ಮಾತನಾಡಿದ್ದು ತಪ್ಪು. ನಮಗೆ ಸಮಯ ಬೇಕು, ಸಿನಿಮಾ ಮಾಡಿ ಹಣ ವಾಪಸ್ ಕೊಡುತ್ತೀವಿ. ನಾವು ಯಾವತ್ತೂ ಯಾರಿಗೂ ಮೋಸ ಮಾಡಿಲ್ಲ ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button