*ಜಿಲ್ಲಾಧ್ಯಕ್ಷರ ಆಯ್ಕೆಗಾಗಿ ಆಯೋಜಿಸಿದ್ದ ಸಭೆಯಲ್ಲಿ ಕಾಂಗ್ರೆಸ್ ನಾಯಕರ ಹೊಡೆದಾಟ*

ಪ್ರಗತಿವಾಹಿನಿ ಸುದ್ದಿ: ನೂತನ ಜಿಲ್ಲಾಧ್ಯಕ್ಷರ ಆಯ್ಕೆಗಾಗಿ ಆಯೋಜಿಸಿದ್ದ ಕಾಂಗ್ರೆಸ್ ಸಭೆ ರಣರಂಗವಾಗಿ ಮಾರ್ಪಟ್ಟಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ನಡೆದ ‘ಸಂಘಟನ್ ಸೃಜನ್’ ಅಭಿಯಾನದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಈ ರಂಪಾಟ ನಡೆದಿದೆ.
ಎಐಸಿಸಿ ವೀಕ್ಷಕರ ಸಮ್ಮುಖದಲ್ಲೇ ಚಿಂತಾಮಣಿ ಶಾಸಕ ಡಾ. ಎಂ.ಸಿ. ಸುಧಾಕರ್ ಹಾಗೂ ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದು, ಕೈ ಕಾರ್ಯಕರ್ತರೊಬ್ಬರಿಗೆ ತೀವ್ರ ಥಳಿತ ಬಿದ್ದಿದೆ.
ಶಿಡ್ಲಘಟ್ಟ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ಅವರನ್ನು ಸಭೆಗೆ ಕರೆದು ಮಾತುಕತೆ ನಡೆಸುವ ಬದಲು, ಕಳೆದ ಚುನಾವಣೆಯಲ್ಲಿ ಬಂಡಾಯವೆದ್ದು ಪಕ್ಷೇತರವಾಗಿ ಸ್ಪರ್ಧಿಸಿದ್ದ ಪುಟ್ಟ ಆಂಜಿನಪ್ಪ ಅವರನ್ನು ಎಐಸಿಸಿ ವೀಕ್ಷಕರು ಮೊದಲು ಅಭಿಪ್ರಾಯ ಆಲಿಸಲು ಆಹ್ವಾನಿಸಿದರು.
ಪಕ್ಷಕ್ಕಾಗಿ ದುಡಿದವರನ್ನು ಬಿಟ್ಟು ಪಕ್ಷದ್ರೋಹಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಆಕ್ರೋಶಗೊಂಡ ರಾಜೀವ್ ಗೌಡ ಬೆಂಬಲಿಗರು ವೀಕ್ಷಕರ ವಿರುದ್ಧವೇ ಘೋಷಣೆ ಕೂಗತೊಡಗಿದರು.
ಸಭೆಯಲ್ಲಿದ್ದ ರಾಜೀವ್ ಗೌಡ ಆಕ್ರೋಶದಿಂದ ಟೇಬಲ್ ಗುದ್ದಿ ಗಲಾಟೆ ಸೃಷ್ಟಿಸಿದಾಗ, ಹೊರಗಿದ್ದ ಶಾಸಕ ಡಾ. ಎಂ.ಸಿ. ಸುಧಾಕರ್ ಸಭಾಂಗಣದೊಳಗೆ ಧಾವಿಸಿ ಬಂದು ಶಿಸ್ತು ಪಾಲಿಸುವಂತೆ ಎಚ್ಚರಿಸಿದರು. ಈ ವೇಳೆ ರಾಜೀವ್ ಗೌಡ ಬೆಂಬಲಿಗನೊಬ್ಬ ಶಾಸಕ ಸುಧಾಕರ್ ಅವರಿಗೆ ಕೈಬೆರಳು ತೋರಿಸಿ ಕೆಟ್ಟ ಮಾತುಗಳಿಂದ ನಿಂದಿಸಿದಾಗ ಪರಿಸ್ಥಿತಿ ಕೈಮೀರಿತು. ಕೆರಳಿದ ಸುಧಾಕರ್ ಬೆಂಬಲಿಗರು ಸಭಾಂಗಣದಲ್ಲೇ ಆತನ ಮೇಲೆ ಮುಗಿಬಿದ್ದು ಹಿಗ್ಗಾಮುಗ್ಗ ಥಳಿಸಿದರು.
ಒಂದೆಡೆ ವೀಕ್ಷಕರ ಎದುರೇ ಶಾಸಕರು ಮತ್ತು ಬೆಂಬಲಿಗರ ಕೈಕೈ ಮಿಲಾಯಿಸುವಿಕೆ, ಇನ್ನೊಂದೆಡೆ ಘೋಷಣೆಗಳ ಆರ್ಭಟದಿಂದಾಗಿ ಕಲ್ಯಾಣ ಮಂಟಪದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿದ್ದ ಇತರ ಹಿರಿಯ ನಾಯಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹದಕ್ಕೆ ತರಲು ಹರಸಾಹಸ ಪಟ್ಟರಾದರೂ, ಜಿಲ್ಲಾ ಕಾಂಗ್ರೆಸ್‌ನಲ್ಲಿ ಹೊತ್ತಿ ಉರಿಯುತ್ತಿರುವ ಬಂಡಾಯದ ಬೆಂಕಿ ಮತ್ತೆ ಬೀದಿಗೆ ಬಂದಂತಾಗಿದೆ.




