*ದೇಶದಲ್ಲಿ ವಿದ್ವಂಸಕ ಕೃತ್ಯಕ್ಕೆ ಪ್ಲ್ಯಾನ್*: *ಟೆಲಿಗ್ರಾಂ ಗ್ರೂಪ್ ನಡೆಸುತ್ತಿದ್ದ ಯುವಕ ಬಂಧನ*

ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ.
ಟೆಲಿಗ್ರಾಂನಲ್ಲಿ ಗ್ರೂಪ್‌ವೊಂದನ್ನು ರಚಿಸಿಕೊಂಡು ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಕುರಿತು ಚರ್ಚೆ ನಡೆಸುತ್ತಿದ್ದರು. ಜೊತೆಗೆ ಗ್ರೂಪ್‌ನಲ್ಲಿ ದಾಳಿ ನಡೆಸುವುದು ಹಾಗೂ ಅದಕ್ಕೆ ಅಗತ್ಯವಿರುವ ಹಣವನ್ನು ಸಂಗ್ರಹಿಸುವ ಕುರಿತು ಚರ್ಚೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರ ಪೊಲೀಸರು ಬಾಪೂಜಿನಗರ ನಿವಾಸಿ ಶಬ್ಬೀರ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರ ಪ್ರಕಾರ, ಶ್ರೀಮಂತರನ್ನು ಅಪಹರಿಸಿ ಹಣ ಸಂಗ್ರಹಿಸಿ, ಅದನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸುವ ಕುರಿತು ಗ್ರೂಪ್‌ನಲ್ಲಿ ಚರ್ಚೆ ನಡೆದಿತ್ತು. ಹಣ ಸಂಗ್ರಹಿಸಿದ ಬಳಿಕ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಉದ್ದೇಶದ ಬಗ್ಗೆಯೂ ಚರ್ಚೆ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಲ್ಲದೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಕುರಿತು ಟೆಲಿಗ್ರಾಂ ಗ್ರೂಪ್‌ನಲ್ಲಿ ಚರ್ಚೆ ನಡೆದಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.
ದೇಶದ ವಿವಿಧ ಭಾಗಗಳ ಹಲವು ಮಂದಿ ಈ ಟೆಲಿಗ್ರಾಂ ಗ್ರೂಪ್‌ನ ಸದಸ್ಯರಾಗಿದ್ದು, ಅವರ ಗುರುತು ಹಾಗೂ ಚಟುವಟಿಕೆಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಶಬ್ಬೀರ್‌ನ ಡಿಜಿಟಲ್ ಚಟುವಟಿಕೆಗಳು, ಗ್ರೂಪ್‌ನಲ್ಲಿನ ಸಂವಹನ ಹಾಗೂ ಇತರ ಸದಸ್ಯರ ಸಂಪರ್ಕಗಳ ಕುರಿತು ತನಿಖೆ ನಡೆಯುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 113 ಅಡಿ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಬಳ್ಳಾಪುರ ನಗರ ಪೊಲೀಸರು, ಬಂಧಿತ ಶಬ್ಬೀರ್‌ನ ವಿಚಾರಣೆ ನಡೆಸುತ್ತಿದ್ದಾರೆ.




