
ಪ್ರಗತಿವಾಹಿನಿ ಸುದ್ದಿ: ಆರ್ ಟಿ ಒ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಫಿಟ್ನೆಸ್, ಇನ್ಶುರೆನ್ಸ್ ಇಲ್ಲದೇ ಓಡಾಟ ನಡೆಸುತ್ತಿದ್ದ ಖಾಸಗಿ ಶಾಲಾ ವಾಹನಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ವಿಜಯನಗರ ಜಿಲ್ಲೆಯ ಆರ್‌ಟಿಒ ಅಧಿಕಾರಿಗಳ ತಂಡವಿಶೇಷ ಕಾರ್ಯಾಚರಣೆ ನಡೆಸಿದ್ದು, 300ಕ್ಕೂ ಹೆಚ್ಚು ಶಾಲಾ ವಾಹನಗಳನ್ನ ಜಪ್ತಿ ಮಾಡಿದೆ. ಜಿಲ್ಲೆಯಲ್ಲಿ ಫಿಟ್ನೆಸ್, ಇನ್ಶುರೆನ್ಸ್ ಇಲ್ಲದೇ ಓಡಾಟ ನಡೆಸುತ್ತಿದ್ದ ಖಾಸಗಿ ಶಾಲೆಗಳ 390 ವಾಹನಗಳನ್ನ ಆರ್‌ಟಿಒ ಅಧಿಕಾರಿಗಳ ತಂಡ ಜಪ್ತಿ ಮಾಡಿದೆ.
ಕಳೆದ ಫೆಬ್ರವರಿಯಿಂದ ಈವರೆಗೆ 103 ಪ್ರಕರಣಗಳು ದಾಖಲಾಗಿದ್ದು, 11 ಲಕ್ಷ ರೂ.ಗಿಂತಲೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ದಂಡ ಪಾವತಿಸಿದ ಬಳಿಕ ವಾಹನಗಳನ್ನ ಬಿಟ್ಟು ಕಳಿಸಲಾಗಿದೆ.
ಇನ್ನೂ ಜಪ್ತಿ ಮಾಡಿದ ಖಾಸಗಿ ಶಾಲಾ ವಾಹನ ಮಾಲೀಕರಿಂದ ದಂಡ ವಸೂಲಿ ಮಾಡಿರುವ ಅಧಿಕಾರಿಗಳು, ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ವಾಹನಗಳ ದಾಖಲಾತಿಗಳನ್ನ ಸರಿಪಡಿಸಿಕೊಂಡು ರಸ್ತೆಗೆ ವಾಹನ ಇಳಿಸಬೇಕು ಎಂದು ವಿಜಯನಗರ ಜಿಲ್ಲೆಯ ಆರ್‌ಟಿಒ ಅಧಿಕಾರಿ ಕೆ. ದಾಮೋದರ ಖಾಸಗಿ ಶಾಲಾ ಆಡಳಿತ ಮಂಡಳಿ ಮಾಲೀಕರು ಹಾಗೂ ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.



