*ಕಾವೇರಿ ನದಿ ನೀರು ವಿವಾದ: ಜು.31ಕ್ಕೆ ಬೃಹತ್ ಹೋರಾಟಕ್ಕೆ ಕರೆ ಕೊಟ್ಟ ಬಿ.ವೈ.ವಿಜಯೇಂದ್ರ*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿಗೆ ಪ್ರತಿದಿನ 3500 ಕ್ಯೂಸೆಕ್ ಕಾವೇರಿ ನೀರು ಬಿಡಬೇಕು ಎಂಬ ಕಾವೇರಿ ನೀರು ನಿರ್ವಾಹಣಾ ಸಮಿತಿ(CWRC) ಆದೇಶ ರೈತರಿಗೆ ಬರದ ನಡುವೆ ಬರೆ ಎಳೆದಂತಾಗಿದೆ. ಈ ವಿಚಾರವಾಗಿ ಜು.31ಕ್ಕೆ ಮಂಡ್ಯದಲ್ಲಿ ಬೃಹತ್ ಹೋರಾಟ ನಡೆಸುತ್ತೇವೆ. ಆ ಭಾಗದ ರೈತರು, ರೈತ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕರೆ ನೀಡಿದ್ದಾರೆ.
ಶಿವಮೊಗ್ಗದ ಬೆಕ್ಕಿನಕಲ್ಮಠದಲ್ಲಿ ಗುರುಪೂರ್ಣಿಮೆಯ ಸಲುವಾಗಿ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, CWRC ತೀರ್ಪು ಕಾವೇರಿ ಕೊಳ್ಳದ ರೈತರಿಗೆ ಬರೆ ಎಳೆದಂತೆ ಆಗಿದೆ. ಬರ ಪರಿಸ್ಥಿತಿ ಇದೆ, ಯಾರು ಕೂಡ ಬೆಳೆ ಬೆಳೆಯಬೇಡಿ ಎಂದು ಸಿಎಂ ಡಿ.ಕೆ.ಶಿವಕುಮಾರ್ ಕೆಲವು ದಿನದ ಹಿಂದೆ ಕರೆ ಕೊಟ್ಟಿದ್ದರು. ರಾಜ್ಯದ ರೈತರಿಗೆ ಸಿಎಂ ಧೈರ್ಯ ತುಂಬಬೇಕಿತ್ತು. ಅವರು ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಕದ್ದುಮುಚ್ಚಿ ರಾತ್ರೋರಾತ್ರಿ ನೀರು ಬಿಡುವ ಕೆಲಸ ಆಗಿತ್ತು. ತಮಿಳುನಾಡಿನ ಮುಖ್ಯಮಂತ್ರಿಗಳನ್ನು ಖುಷಿ ಪಡಿಸಲು ರಾಜ್ಯದ ರೈತರಿಗೆ ಸಿಎಂ ಅನ್ಯಾಯ ಮಾಡಿದ್ದರು. ಯಾಕೇ ಇಂತಹ ಕಪಟ ನಾಟಕ ಮಾಡುತ್ತಿದ್ದೀರಿ? ಸಿಎಂ ಯಾಕೆ ರೈತರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ? ಈ ಚೆಲ್ಲಾಟ ಆಡೋದು ಬಿಟ್ಟು, ಸಮಿತಿಗೆ ಮರು ಪರಶೀಲನಾ ಅರ್ಜಿ ದಾಖಲಿಸಬೇಕು ಎಂದು ಆಗ್ರಹಿಸಿದರು.
ಡ್ಯಾಂನಲ್ಲಿ 17.39 ಟಿಎಂಸಿ ನೀರು ಸಂಗ್ರಹವಿದೆ. ಅದರಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್. ಉಳಿದ 12-13 ಟಿಎಂಸಿ ನೀರಲ್ಲಿ ತಮಿಳುನಾಡಿಗೆ ಬಿಟ್ಟರೇ ರಾಜ್ಯದ ರೈತರ ಗತಿಯೇನು? ಸಿಎಂ ಯಾಕೇ ಆ ಭಾಗದ ರೈತರ ಜೊತೆ ಚೆಲ್ಲಾಟ ಆಡ್ತಿದ್ದಾರೆ. ಸಮಿತಿ ಮುಂದೆ ಸರಿಯಾದ ರೀತಿ ವಾದ ಮಾಡಬೇಕು ಎಂದರು.




