
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಭಾರತ್ ಜೋಡೋ ಯುವ ಸಂಘ”ಗಳನ್ನು ವಿಕಾಸಶೀಲ ಮತ್ತು ಸೌಹಾರ್ದಶೀಲ ಕರ್ನಾಟಕ ನಿರ್ಮಾಣಕ್ಕಾಗಿ, ಸಮುದಾಯ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯ, ಕ್ರೀಡೆ, ಫಿಟ್ ನೆಸ್ ಮತ್ತು ಕೌಶಲ್ಯಾಭಿವೃದ್ಧಿಯ ಮೂಲಕ ಯುವ ಜನರನ್ನು ಸಬಲೀಕರಣಗೊಳಿಸಿ ತಳಮಟ್ಟದ ಆಡಳಿತದಲ್ಲಿ ಸಕ್ರಿಯ ಪಾಲುದಾರರನ್ನಾಗಿ ಮಾಡಲು ಪ್ರತಿ ಗ್ರಾಮ ಪಂಚಾಯತಿ ಮತ್ತು ನಗರ ವಾರ್ಡ್ಗಳಲ್ಲಿ ಸಶಕ್ತ ಯುವ ಜನತೆಯನ್ನೊಳಗೊಂಡ ಬಲಿಷ್ಠ ಸಮುದಾಯಗಳನ್ನು ಒಂದುಗೂಡಿಸುವ ಉದ್ದೇಶದಿಂದ ಸ್ಥಾಪಿಸಲಾಗುತ್ತಿದೆ.
ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದು ಸಂಘ, ಪ್ರತಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸರಾಸರಿ 4000 ಜನಸಂಖ್ಯೆಗೆ ಒಂದು ಸಂಘ, ಪ್ರತಿ ಪುರಸಭೆಯಲ್ಲಿ ಸರಾಸರಿ 6000 ಜನಸಂಖ್ಯೆಗೆ ಒಂದು ಸಂಘ, ಪ್ರತಿ ನಗರ ಸಭೆಯಲ್ಲಿ ಸರಾಸರಿ 8000 ಜನಸಂಖ್ಯೆಗೆ ಒಂದು ಸಂಘ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸರಾಸರಿ 10000 ಜನಸಂಖ್ಯೆಗೆ ಒಂದು ಸಂಘ ಸ್ಥಾಪಿಸಲಾಗುವುದು.
16 ರಿಂದ 35 ವರ್ಷದೊಳಗಿನ ಯುವಕ, ಯುವತಿಯರು ಸಂಘದ ಸದಸ್ಯರಾಗಬಹುದಾಗಿರುತ್ತದೆ. ಪ್ರತಿ ಸಂಘಕ್ಕೆ ನಿಗದಿಪಡಿಸಿದ ಕಾರ್ಯ ಚಟುವಟಿಕೆಗಳಿಗಾಗಿ ರೂ.10.00 ಲಕ್ಷಗಳ ಅನುದಾನ ಒದಗಿಸಲಾಗುವುದು.
ಬೆಳಗಾವಿ ಜಿಲ್ಲೆಯ ಆಸಕ್ತ ಯುವಕ, ಯುವತಿಯರು ಭಾರತ್ ಜೋಡೋ ಯುವ ಸಂಘ ಅಧಿಕೃತ ಜಾಲತಾಣ https://bjys.karnataka.gov.in/ ಮೂಲಕ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.



