Kannada NewsKarnataka NewsNationalTravel
*ಗ್ರಾಹಕರಿಗೆ ಮತ್ತೊಂದು ಶಾಕ್: ಸಿಎನ್ಜಿ ದರದಲ್ಲಿ ಮತ್ತೆ ಏರಿಕೆ*

ಪ್ರಗತಿವಾಹಿನಿ ಸುದ್ದಿ: ವಾಹನ ಮಾಲೀಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ದೆಹಲಿಯಲ್ಲಿ ಸಂಕುಚಿತ ನೈಸರ್ಗಿಕ ಅನಿಲ (CNG) ದರದಲ್ಲಿ ಪ್ರತಿ ಕೆಜಿಗೆ 3.89 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಈ ನೂತನ ದರ ಪರಿಷ್ಕರಣೆ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದ್ದು, ದೆಹಲಿಯಲ್ಲಿ ಪ್ರಸ್ತುತ ಒಂದು ಕೆಜಿ ಸಿಎನ್ಜಿ ಬೆಲೆ 86.98 ರೂಪಾಯಿಗೆ ತಲುಪಿದೆ.
ದೆಹಲಿ-ಎನ್ಸಿಆರ್ ಭಾಗದಲ್ಲಿ ಸಿಎನ್ಜಿ ಪೂರೈಸುವ ಸಾರ್ವಜನಿಕ ವಲಯದ ಇಂದಿರಾಗಾಂಧಿ ಗ್ಯಾಸ್ ಲಿಮಿಟೆಡ್ ಕಂಪನಿಯು ಈ ಬೆಲೆ ಏರಿಕೆಯನ್ನು ಪ್ರಕಟಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದ್ರವೀಕೃತ ನೈಸರ್ಗಿಕ ಅನಿಲದ ಆಮದು ವೆಚ್ಚ ವಿಪರೀತ ಹೆಚ್ಚಿರುವುದೇ ಈ ಬೆಲೆ ಪರಿಷ್ಕರಣೆಗೆ ಮುಖ್ಯ ಕಾರಣ ಎಂದು ಕಂಪನಿ ತಿಳಿಸಿದೆ.
ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ಅನಿಲದ ವೆಚ್ಚ ಸತತವಾಗಿ ಏರುತ್ತಿರುವುದರಿಂದ, ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಬೇಕಾಯಿತು ಎಂದು ಕಂಪನಿ ಸ್ಪಷ್ಟನೆ ನೀಡಿದೆ.



