*ಮತ್ತೆ ಮಿತಿ ಮೀರಿದ ಮೀಟರ್ ಬಡ್ಡಿದಂಧೆ: ಸಾಲದ ಹೆಸರಲ್ಲಿ 1.5 ಕೋಟಿ ರೂ. ಆಸ್ತಿ ಕಬಳಿಸಿದ ಬಡ್ಡಿ ದಂಧೆಕೋರರು*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಮತ್ತೆ ಮೀಟರ್ ಬಡ್ಡಿ ದಂಧೆ ಪ್ರಕರಣಗಳು ಹೆಚ್ಚುತ್ತಿವೆ. ಸಾಲ ನೀಡಿದ ನೆಪದಲ್ಲಿ ಬಡ್ಡಿ ಬಕಾಸುರರು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಕಬಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಗದಗ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ ಮಿತಿಮೀರಿದ್ದು, ಸಾಲದ ಸುಳಿಗೆ ಸಿಲುಕಿದ ತಾಯಿ ಸುರೇಖಾ ಕಬಾಡಿ ಹಾಗೂ ಮಗಳು ಅಂಬಿಕಾ ಕಬಾಡಿ ಕುಟುಂಬ ಬೀದಿಗೆ ಬಿದ್ದಿದೆ.
ತಾಯಿ-ಮಗಳು ಬಡ್ಡಿ ದಂಧೆಕೋರರಾದ ಯಲ್ಲಪ್ಪ ಮಿಸ್ಕಿನ್ ಹಾಗೂ ಸುನಿಲ್ ಸೇಠ್ ಅವರಿಂದ ತಲಾ 6 ಲಕ್ಷ ರೂ.ನಂತೆ ಒಟ್ಟು 12 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈವರೆಗೆ ಕಂತುಗಳಲ್ಲಿ ಸುಮಾರು 7 ಲಕ್ಷ ರೂ. ಬಡ್ಡಿ ರೂಪದಲ್ಲೇ ಪಾವತಿಸಿದ್ದಾರೆ. ಆದರೆ ಸಾಲದ ಹಣದ ನೆಪದಲ್ಲಿ ಕುಟುಂಬಕ್ಕೆ ಬೆದರಿಕೆ ಹಾಕಿದ ದಂಧೆಕೋರರು, ಹಾಫ್ ನೋಂದಣಿ ಹೆಸರಿನಲ್ಲಿ ಸುಮಾರು 1.5 ಕೋಟಿ ರೂ. ಮೌಲ್ಯದ 12 ಪ್ಲಾಟ್‌ಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ ಎಂದು ಮಗಳು ಅಂಬಿಕಾ ಕಬಾಡಿ ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 4-5 ಕೋಟಿ ರೂ. ಮೌಲ್ಯದ 9,000 ಚದರ ಮೀಟರ್ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಈ ಸಂಬಂಧ 2025ರ ಮಾರ್ಚ್ 15ರಂದು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದಂಧೆಕೋರರಾದ ಯಲ್ಲಪ್ಪ ಮಿಸ್ಕಿನ್, ವಿಕಾಸ್ ಮಿಸ್ಕಿನ್, ಸುನಿಲ್ ಸೇಠ್, ಪೂನಮ್ ಸೇಠ್ ಸೇರಿದಂತೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ ದೂರು ನೀಡಿ ವರ್ಷ ಕಳೆಯುತ್ತಿದ್ದರೂ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ಪೊಲೀಸ್ ಅಧಿಕಾರಿಗಳು ಹಾಗೂ ಸಮಾಜದ ಪ್ರಭಾವಿ ಮುಖಂಡರು ಬಡ್ಡಿ ದಂಧೆಕೋರರ ಬೆಂಬಲಕ್ಕಿರುವುದೇ ಅನ್ಯಾಯಕ್ಕೆ ಕಾರಣವಾಗಿದೆ ಎಂದು ತಾಯಿ-ಮಗಳು ಕಣ್ಣೀರಿಟ್ಟಿದ್ದಾರೆ.


